ಬೆಂಗಳೂರು: ಶಾಲೆಯ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸುವಂತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಫೇಸ್‌ಬುಕ್ ಪೋಸ್ಟ್ ಮಾಡಿರುವ ಡಾ. ಎಚ್.ಸಿ. ಮಹದೇವಪ್ಪ, ಕಳೆದ ಸರ್ಕಾರದ ಅವಧಿಯಲ್ಲಿ ಬಡ ಮಕ್ಕಳು ಶುಲ್ಕ ಪಾವತಿಸದೇ ಇದ್ದರೆ ಶಿಕ್ಷಣ ಪಡೆಯುವುದಕ್ಕೆ ಸಾಕಷ್ಟು ಅಡ್ಡಿ ಮಾಡಲಾಗುತ್ತಿತ್ತು. ಆದರೆ ಶಿಕ್ಷಣ ಎನ್ನುವುದು ಪ್ರಾಥಮಿಕವಾದ ಹಕ್ಕಾಗಿದ್ದು ಶುಲ್ಕದ ನೆಪವೊಡ್ಡಿ ಯಾವುದೇ ವಿದ್ಯಾರ್ಥಿಗೂ ಕೂಡಾ ಶಿಕ್ಷಣದ ಸೌಲಭ್ಯವನ್ನು ವಂಚಿಸುವಂತಿಲ್ಲ. ಶುಲ್ಕದ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣ ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡದೇ ತಮ್ಮದೇ ದುರಾಡಳಿತದ ಗೋಜಲಿನಲ್ಲಿ ಮುಳುಗಿದ್ದ ಈ ಹಿಂದಿನ ಸರ್ಕಾರದ ಅರಾಜಕತೆಯನ್ನು ಖಂಡಿಸುತ್ತೇನೆ. ಎಲ್ಲ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಕ್ಕೆ ವಿದ್ಯಾರ್ಥಿ ವೇತನ ದೊರೆಯುವಂತೆ ಶಿಸ್ತುಬದ್ಧವಾಗಿ ಕ್ರಮ ಕೈಗೊಂಡು ಎಲ್ಲಾ ಅಧಿಕಾರಿಗಳಿಗೂ ಸಹ ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು.
ವಿದ್ಯಾರ್ಥಿ ವೇತನದ ವಿಷಯದಲ್ಲಿ ತೊಂದರೆ ಉಂಟು ಮಾಡಿದರೆ ಅದನ್ನು ವಿದ್ಯಾರ್ಥಿಗಳು ನಮ್ಮ ಗಮನಕ್ಕೆ ತರಬೇಕು ಎಂದು ಈ ಮೂಲಕ ವಿನಂತಿಸುತ್ತೇನೆ. ಕಠಿಣ ಶ್ರಮದ ಮೂಲಕ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಮನದುಂಬಿ ಹಾರೈಸುತ್ತೇನೆ ಎಂದಿದ್ದಾರೆ.
ಇದೀಗ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶುಲ್ಕ ಪಾವತಿಯೂ ಶುರುವಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವರು ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.
ಇದನ್ನೂ ಓದಿ: School Reopen: ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢಶಾಲೆ ಆರಂಭ