ಬೆಂಗಳೂರು: ರಸ್ತೆ ದಾಟಲು ಹೋದ 2 ವರ್ಷದ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದವಳ ಮೇಲೆ ಕಾರು ಹರಿದು ಮೃತಪಟ್ಟಿರುವ ದಾರುಣ (Road accident) ಘಟನೆ ನಾಗರಭಾವಿ ವಿಲೇಜ್‌ನಲ್ಲಿ ನಡೆದಿದೆ. ಝೂನ್ಸಿ ಮೃತ ದುರ್ದೈವಿ.
ಝೂನ್ಸಿ ತನ್ನ ಅಮ್ಮನೊಂದಿಗೆ ಧನಲಕ್ಷ್ಮಿ ಜ್ಯುವೆಲ್ಲರಿ ಶಾಪ್‌ಗೆ ಹೋಗಿದ್ದಳು. ಜ್ಯುವೆಲ್ಲರಿ ಶಾಪ್‌ವೊಳಗೆ ಇದ್ದಾಗ ಹೊರಗೆ ರಸ್ತೆ ಬದಿಯಲ್ಲಿ ನಿಂತಿದ್ದ ತನ್ನ ಚಿಕ್ಕಮ್ಮನ ಕಂಡಿದ್ದಾಳೆ. ಖುಷಿಯಿಂದ ಚಿಕ್ಕಮ್ಮನ ಬಳಿ ಹೋಗಲು ರಸ್ತೆ ದಾಟಿ ಮುಂದಾಗಿದ್ದಾಳೆ. ಈ ವೇಳೆ ವೇಗವಾಗಿ ಬಂದ ಕಾರು ಬಡಿದಿದೆ.
ಕಾರು ಬಡಿದ ರಭಸಕ್ಕೆ ಕೆಳಗೆ ಬಿದ್ದ ಬಾಲಕಿ ತಲೆ ಮೇಲೆ ಕಾರಿನ ಚಕ್ರ ಹರಿದಿದೆ. ಕಾರನ್ನು ವೈದ್ಯ ಉಪೇಂದ್ರ ಎಂಬಾತ ಚಲಾಯಿಸುತ್ತಿದ್ದ ಎನ್ನಲಾಗಿದೆ. ವೈದ್ಯರಾಗಿದ್ದರೂ ಮಗುವಿನ ರಕ್ಷಣೆಗೆ ಬಾರದೆ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಕೂಡಲೇ ಸ್ಥಳೀಯರ ಸಹಾಯದಿಂದ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಕಾರಿನ ಚಕ್ರ ತಲೆ ಮೇಲೆ ಹರಿದ ಪರಿಣಾಮ ಗಂಭೀರ ಗಾಯಯೊಂಡಿದ್ದ ಮಗುವು ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಓವರ್ ಟೇಕ್ ತಂದ ಆಪತ್ತು; ಬಸ್‌ಗೆ ಟಿಪ್ಪರ್ ಲಾರಿ ಡಿಕ್ಕಿ
ಸಾರಿಗೆ ಸಂಸ್ಥೆಯ ಬಸ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಹುಬ್ಬಳ್ಳಿಯ ಕಿರೇಸೂರ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಓವರ್‌ಟೇಕ್ ಮಾಡುವಾಗ ಬಸ್‌ಗೆ ಟಿಪ್ಪರ್ ಡಿಕ್ಕಿ ಹೊಡದಿದೆ. ಬಸ್ ಹಾಗೂ ಟಿಪ್ಪರ್ ಚಾಲಕರು ಸೇರಿ ಹನ್ನೆರಡು ಜನರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಹಾಗೂ ಟಿಪ್ಪರ್ ಲಾರಿಯು ಜಖಂಗೊಂಡಿತ್ತು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲದಲ್ಲಿ ಸರಣಿ ಭೀಕರ ಅಪಘಾತ
ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ನಡೆದಿದೆ. ನೆಲಮಂಗಲ ತಾಲೂಕಿನ ತೊಣಚಿನಗುಪ್ಪೆ ಬಳಿ ಐದು ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಮುಂಜಾನೆ ಸಂಪೂರ್ಣವಾಗಿ ಮಂಜಿನಿಂದ ಆವರಿಸಿರುವ ಕಾರಣಕ್ಕೆ ರಸ್ತೆ ಕಾಣದೆ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತೊಣಚಿನಕುಪ್ಪೆ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.