ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಬರಗಿ ಕ್ರಾಸ್ ಬಳಿ ಶಾಲಾ ವಾಹನ ಹರಿದು 4 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಶಾಲೆಗೆ ಹೋಗಬೇಕಿದ್ದ ಪುಟ್ಟ ಕಂದಮ್ಮ, ಶಾಲಾ ಬಸ್ ಚಕ್ರಕ್ಕೆ ಸಿಲುಕಿ ದುರಂತ ಸಾವು ಕಂಡಿದೆ. ಸಂಗಪ್ಪ ಹೊಸೂರ್ ಎಂಬುವವರ ಪುತ್ರ ಅಭಿನಂದನ್ ಹೊಸೂರ್ (4) ಮೃತ ಬಾಲಕ.
ಶಾಲಾ ವಾಹನ ಹರಿದು ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದರಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ | Prajwal Revanna Case: ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಬಂಧನ
ರಾಜಹಂಸ-ಐರಾವತ ಬಸ್ ಡಿಕ್ಕಿ; ಅಪಘಾತ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಟೆಂಪೋ
ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿಘಾಟ್ ಶನಿವಾರ ಸರಣಿ ಅಪಘಾತ ನಡೆದಿದೆ. ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಈ ವೇಳೆ ಅಪಘಾತ ತಪ್ಪಿಸಲು ಹೋಗಿ ಟೆಂಪೋ ಚರಂಡಿಗೆ ಬಿದ್ದಿದೆ. ಹೀಗಾಗಿ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ. ಅಪಘಾತದಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಬಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಹೇಮಾವತಿ ನದಿಗೆ ಬಿದ್ದ ಮತ್ತೊಂದು ಕಾರು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಈ ನಡುವೆ ಹೇಮಾವತಿ ನದಿಗೆ ಶನಿವಾರ ಮತ್ತೊಂದು ಕಾರು ಬಿದ್ದಿದೆ. ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರು ನದಿಗೆ ಬಿದ್ದಿದೆ. ನೆನ್ನೆ ಅದೇ ಜಾಗದಲ್ಲಿ ಅದೇ ಶೈಲಿಯಲ್ಲಿ ಸ್ವಿಫ್ಟ್ ಕಾರು ಬಿದ್ದಿತ್ತು.
ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿಯಿಂದ ಮೂಡಿಗೆರೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಹಾರಿ ನದಿಗೆ ಬಿದ್ದಿದೆ.
ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಡಿವೈಡರ್‌ಗೆ ಗುದ್ದಿ ಹಳ್ಳಕ್ಕೆ ಜಿಗಿದ ಕೆಎಸ್‌ಆರ್‌ಟಿಸಿ
ಮಂಡ್ಯ: ಶನಿವಾರ ಒಂದೇ ದಿನ ಹಲವೆಡೆ ರಸ್ತೆ ಅಪಘಾತಗಳು (Road Accident) ಸಂಭವಿಸಿದೆ. ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಡಿವೈಡರ್ ದಾಟಿ ಸರ್ವಿಸ್ ರಸ್ತೆಯ ಹಳ್ಳಕ್ಕೆ ಉರುಳಿದ ಘಟನೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್ ವೇಗವಾಗಿ ಬಂದು ನೋಡನೋಡುತ್ತಿದ್ದಂತೆ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಮೇಲೆ ಹತ್ತಿದೆ. ಬಳಿಕ ಸರ್ವಿಸ್ ರಸ್ತೆಗೆ ಬಂದು ಹಳ್ಳಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ.
Vinay Kulkarni: ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆ ಪ್ರವೇಶ ಮತ್ತೆ ನಿರಾಕರಿಸಿದ ಕೋರ್ಟ್
ಗಂಭೀರವಾಗಿ ಗಾಯಗೊಂಡವರನ್ನು ಮಂಡ್ಯ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಣ್ಣ-ಪುಟ್ಟ ಗಾಯಗೊಂಡವರು ಬೇರೆ ಬಸ್ ಮುಖಾಂತರ ತೆರಳಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.