Site icon Vistara News

Road Accident: ಯಾದಗಿರಿಯಲ್ಲಿ ಭೀಕರ ಅಪಘಾತಕ್ಕೆ ಐವರ ಸಾವು, 13 ಮಂದಿಗೆ ಗಾಯ

accident in yadagiri

ಯಾದಗಿರಿ: ಇಲ್ಲಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಎ)ನಲ್ಲಿ ಮಂಗಳವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಐದು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಲ್ಲದೆ, ಕ್ರೂಸರ್‌ನಲ್ಲಿದ್ದ 13 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕ್ರೂಸರ್‌ ಡಿಕ್ಕಿ ಹೊಡೆದಿದ್ದೇ ಈ ಅವಘಡಕ್ಕೆ ಕಾರಣವಾಗಿದೆ.

ರಮಿಜಾ ಬೇಗಂ (50), ಮುನೀರ್ (40), ನಯಾಮತ್ (40), ಮುದಸ್ಸೀರ್ (12) ಮತ್ತು ಸುಮ್ಮಿ (12) ಮೃತಪಟ್ಟವರು. ಇವರು ಆಂಧ್ರ ಪ್ರದೇಶ ಮೂಲದವರು ಎನ್ನಲಾಗಿದೆ. ಮುನೀರ್ ಹಾಗೂ ಮುದಸ್ಸೀರ್ ಅಪ್ಪ, ಮಗ ಎಂದು ಹೇಳಲಾಗಿದ್ದು, ಆಂಧ್ರದ ಬಂಡಿ ಆತ್ಮಕೂರು ಗ್ರಾಮದವರು ಎಂದು ತಿಳಿದುಬಂದಿದೆ. ಉಳಿದ ಮೂವರು ವೆಲಗುಡ ಗ್ರಾಮದವರು ಎಂಬ ಮಾಹಿತಿ ಬಂದಿದೆ.

ಆಂಧ್ರ ಪ್ರದೇಶದ ನಂದ್ಯಾಳ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾದ ಉರುಸ್ ಜಾತ್ರೆಗಾಗಿ ಕ್ರೂಸರ್‌ನಲ್ಲಿದ್ದವರು ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ನಸುಕಿನ ಜಾವ ಆಗಿದ್ದರಿಂದ ಕ್ರೂಸರ್‌ ಚಾಲಕ ನಿದ್ರೆ ಮಂಪರಿನಲ್ಲಿ ನಿಂತಿದ್ದ ಲಾರಿಗೆ ಗುದ್ದಿರಬಹುದು ಎಂದು ಅಂದಾಜಿಸಲಾಗಿದೆ. ವೇಗವಾಗಿದ್ದರಿಂದ ಗುದ್ದಿದ ರಭಸಕ್ಕೆ ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Monsoon Driving: ಮಳೆಗಾಲದಲ್ಲಿ ಕಾರು ಪ್ರಯಾಣಕ್ಕೆ ಹೊರಡುವಾಗ ಈ ಟಿಪ್ಸ್‌ ಗಮನದಲ್ಲಿರಲಿ

ಸೈದಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೈದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಐವರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ. ಇನ್ನು ಗಾಯಗೊಂಡ 13 ಜನರನ್ನು ಯಾದಗಿರಿ ಮತ್ತು ರಾಯಚೂರು ಜಿಲ್ಲಾಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಚಾರ್ಮಾಡಿ ಘಾಟ್‌ನಲ್ಲಿ ಸಾರಿಗೆ ಬಸ್‌ ಚಕ್ರಕ್ಕೆ ಸಿಲುಕಿ ಸ್ಕೂಟರ್‌ ಸವಾರ ಸಾವು

ಚಿಕ್ಕಮಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ (ಕೆಕೆಆರ್‌ಟಿಸಿ) ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನ ಮೂರನೇ ತಿರುವಿನಲ್ಲಿ ನಡೆದಿದೆ. ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್‌ ಸವಾರ ಬಸ್‌ ಕೆಳಗೆ ಬಿದ್ದಿದ್ದರಿಂದ ದುರಂತ (Bike Accident) ಸಂಭವಿಸಿದೆ.

ಮಾಗುಂಡಿ ಗ್ರಾಮದ ಇರ್ಫಾನ್ (29) ಮೃತ ಸವಾರ, ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗಳಾಗಿವೆ. ಚಾರ್ಮಾಡಿ ಘಾಟ್‌ನಲ್ಲಿ ಧಾರಾಕಾರ ಮಳೆ‌ ಸುರಿಯುತ್ತಿತ್ತು. ಈ ವೇಳೆ ಸ್ಕೂಟರ್‌ನಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಸವಾರ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಬಸ್‌ ಹಿಂಬದಿ ಚಕ್ರ ಹರಿದಿದ್ದರಿಂದ ಗಂಭೀರವಾಗಿ ಗಾಯಗೊಂಡು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Odisha train accident: ಪೊದೆಯೊಳಗಿಂದ ಕ್ಷೀಣ ಸ್ವರ, ಹೋಗಿ ನೋಡಿದ್ರೆ ಕೈಯಲ್ಲಿ ಜೀವ ಇಟ್ಟುಕೊಂಡು ಕುಳಿತಿದ್ದ ಗಾಯಾಳು!

ಚಿಕ್ಕಮಗಳೂರು – ದಕ್ಷಿಣ ಕನ್ನಡಕ್ಕೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಧರ್ಮಸ್ಥಳದಿಂದ ಹರಪ್ಪನಹಳ್ಳಿಗೆ ತೆರಳುತ್ತಿದ್ದ ಬಸ್‌ನಡಿ ಸಿಲುಕಿ ಸವಾರ ಮೃತಪಟ್ಟಿದ್ದಾರೆ.

Exit mobile version