ತುಮಕೂರು: ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಮೂರು ಅಪಘಾತಗಳು (Road accident) ಸಂಭವಿಸಿದ್ದು, ಒಟ್ಟು ೯ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರ ಸಂಜೆ ಗುಬ್ಬಿಯ ದೊಡ್ಡಗುಣಿ ಕ್ರಾಸ್ ಬಳಿ ಕೆಎಸ್ ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟರೆ, ಬುಧವಾರ ಮಧ್ಯಾಹ್ನ ಇದೇ ಗುಬ್ಬಿಯ ಕೊಂಡ್ಲಿ ಕ್ರಾಸ್ ಬಳಿ ಕ್ಯಾಂಟರ್ ಲಾರಿ ಮತ್ತು ಇಂಡಿಕಾ ಕಾರಿನ ನಡುವಿನ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಸಂಜೆ ಮತ್ತೊಂದು ಅಪಘಾತಕ್ಕೆ ಸಾಕ್ಷಿಯಾಯಿತು ತುಮಕೂರು. ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ಮೂವರು ಮೃತಪಟ್ಟರು.
ಒಂದೇ ಕುಟುಂಬದ ನಾಲ್ವರು ಬಲಿ
ಗುಬ್ಬಿ ತಾಲೂಕಿನ ಕೊಂಡ್ಲಿ ಕ್ರಾಸ್ ಬಳಿ ಬುಧವಾರ ಸಂಭವಿಸಿದ ಅಪಘಾತ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದಿದೆ.…ತುಮಕೂರು ಕಡೆಯಿಂದ ಬಂದ ಕ್ಯಾಂಟರ್ ಲಾರಿ ಚಿಕ್ಕನಾಯಕನಹಳ್ಳಿ ಕಡೆಯಿಂದ ಬರ್ತಿದ್ದ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವಿನಹಳ್ಳಿ ಗ್ರಾಮದ ನಾರಾಯಣಪ್ಪ, ನಾರಾಯಪ್ಪ ಅವರ ಪತ್ನಿ ನಾಗರತ್ನ, ಹಾಗೂ ಮಗ ಸಾಗರ್ ಹಾಗೂ ನಾರಾಯಣಪ್ಪ ಸಂಬಂಧಿ ರಾಜಣ್ಣ ಮೃತಪಟ್ಟವರು.
ನಾರಾಯಣಪ್ಪ ಕುಟುಂಬ ಬೆಂಗಳೂರಿನ ಹೆಗ್ಗನಹಳ್ಳಿ ಬಳಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿತ್ತು. ಕಳೆದ ಭಾನುವಾರ ತನ್ನ ಹುಟ್ಟೂರಿಗೆ ಕುಟುಂಬ ಸಮೇತ ಬಂದಿದ್ದ ನಾರಾಯಣ ಅವರು ಎರಡು ದಿನ ಊರಲ್ಲಿದ್ದು ಬುಧವಾರ ಬೆಂಗಳೂರು ಕಡೆಗೆ ತಮ್ಮ ಇಂಡಿಕಾ ಕಾರಿನಲ್ಲಿ ಹೊರಟ್ಟಿದ್ದಾರೆ. ಈ ವೇಳೆ ಗುಬ್ಬಿ ತಾಲೂಕಿನ ಕೊಂಡ್ಲಿ ಕ್ರಾಸ್ ಬಳಿ ತುಮಕೂರು ಕಡೆಯಿಂದ ಬಂದ ಕ್ಯಾಂಟರ್ ಲಾರಿ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದೆ.
ಕಳ್ಳಂಬೆಳ್ಳ ದುರಂತದಲ್ಲಿ ಮೂವರ ಸಾವು
ಈ ನಡುವೆ, ಶಿರಾ ತಾಲೂಕಿನ ಕಳ್ಳಂಬೆಳ್ಳದ ಜೋಗಿಹಳ್ಳಿ ಬಳಿ ಕಾರೊಂದು ಸೇತುವೆಯಿಂದ ಉರುಳಿಬಿದ್ದು, ಮೂವರು ಪ್ರಾಣ ಕಳೆದುಕೊಂಡರು. ಬೆಂಗಳೂರು ಮೂಲದವರು ಸ್ನೇಹಿತನ ಮದುವೆಗೆಂದು ಸಿಂಧನೂರಿಗೆ ಹೋಗಿ ವಾಪಸ್ಸಾಗುವಾಗ ಘಟನೆ ನಡೆದಿದೆ.
ಹೆದ್ದಾರಿ ಅವ್ಯವಸ್ಥೆಯೇ ಕಾರಣ
ಇನ್ನು ಈ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರೇ ಅಂತ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಸರಿಯಾಗಿ ರಸ್ತೆ ವಿಭಜಕಗಳನ್ನು ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಅಂತ ಆರೋಪ ಮಾಡಲಾಗುತ್ತಿದೆ.
ಇದನ್ನೂ ಓದಿ | Road Accident | ಶಿರಾದ ಜೋಗಿಹಳ್ಳಿ ಸೇತುವೆಯಿಂದ ಕೆಳಗೆ ಬಿದ್ದ ಕಾರು; ಮೂವರ ಸಾವು, ಇಬ್ಬರು ಗಂಭೀರ