ಬೆಂಗಳೂರು: ನಗರದ ನೃಪತುಂಗ ರಸ್ತೆಯಲ್ಲಿ ಬೇಜವಾಬ್ದಾರಿ ಕಾರು ಚಾಲನೆಯಿಂದ ನಡೆದ ಸರಣಿ ಅಪಘಾತ ಪ್ರಕರಣದಲ್ಲಿ ಮೃತರ ಸಂಖ್ಯೆ 2ಕ್ಕೇರಿದೆ. ಕಾರು ಬೈಕ್‌ಗೆ ಡಿಕ್ಕಿಯಾಗಿದ್ದರಿಂದ (Road Accident) ಸೋಮವಾರ ಮಧ್ಯಾಹ್ನ ಸವಾರ ಮಜೀದ್ ಖಾನ್(೩೯) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಯ್ಯಪ್ಪ (೬೦) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಯಲಹಂಕದ ನಿವೃತ್ತ ಫಾರೆಸ್ಟ್ ಆಫೀಸರ್ ರಾಮು ಸುರೇಶ್ ಎಂಬುವವರ ಇನೋವಾ ಕಾರನ್ನು ಚಾಲಕ ಮೋಹನ್ (48) ಎಂಬಾತ ಓಡಿಸುತ್ತಿದ್ದ. ಈತನ ಕಾರು, ಎರಡು ಕಾರು, ಮೂರು ದ್ವಿಚಕ್ರ ವಾಹನ ಸೇರಿ ಒಟ್ಟು ಐದು ವಾಹನಗಳಿಗೆ ಡಿಕ್ಕಿಹೊಡೆದಿತ್ತು. ಮಜೀದ್ ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದರು, ಈಗ ಅಯ್ಯಪ್ಪ ಕೊನೆಯುಸಿರೆಳೆದಿದ್ದಾರೆ. ಮೃತರ ಜತೆಗೆ ಗಾಯಗೊಂಡಿದ್ದ ಬೈಕ್ ಸವಾರರಾದ ರಿಯಾಜ್ ಪಾಷ, ಮೊಹಮ್ಮದ್ ರಿಯಾಜ್, ಮೊಹಮ್ಮದ್ ಸಲೀಂ, ಶೇರ್ ಗಿಲಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ರಿಯಾಜ್ ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.
ಅಪಘಾತ ಮಾಡಿದ ಕಾರಿನಲ್ಲಿ ಶಾಸಕ ಹರತಾಳು ಹಾಲಪ್ಪ ಅವರ ಪಾಸ್ ಇತ್ತು. ಶಾಸಕ ಹರತಾಳು ಹಾಲಪ್ಪನವರ ಬೀಗರ ಹೆಸರಲ್ಲಿ ಕಾರು ನೋಂದಣಿಯಾಗಿದೆ. ಹಾಲಪ್ಪನವರ ಮಗಳ ಪತಿಯ ತಂದೆ ರಾಮು ಸುರೇಶ್ ಅವರ ಹೆಸರಲ್ಲಿ ಕಾರು ನೋಂದಣಿಯಾಗಿದೆ. ಅಪಘಾತ ಮಾಡಿದ್ದರಿಂದ ಚಾಲಕನನ್ನು ಹಲಸೂರು ಗೇಟ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Road Accident: ಶಾಸಕ ಹರತಾಳು ಹಾಲಪ್ಪ ಪಾಸ್ ಹೊಂದಿದ್ದ ಕಾರಿಂದ ಅಪಘಾತ; ಬೈಕ್ ಸವಾರನ ತಲೆ ಮೇಲೆ ಕಾರು ಹರಿದು ಸಾವು