Site icon Vistara News

Road Accident : ಹೈ ಸ್ಪೀಡ್‌ ಎಡವಟ್ಟು; ಬಸ್ಸಿನಡಿ ಸಿಲುಕಿದ ಸವಾರರು, ಬಸ್ಸನ್ನೇ ಪಲ್ಟಿ ಮಾಡಿ ರಕ್ಷಿಸಿದರು

bus fall

ಯಾದಗಿರಿ: ಯಾದಗಿರಿಯ ಶಹಾಪುರ‌ ತಾಲೂಕಿನ ಬಾಣತಿಹಾಳ್ ಸಮೀಪ ಬೈಕ್‌ವೊಂದು ಬಸ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸಮೇತ ಸವಾರರು ಬಸ್‌ನಡಿ (Road Accident) ಸಿಲುಕಿದ್ದರು. ಆ ಅಪಘಾತದ ದೃಶ್ಯವನ್ನು ಕಂಡವರೆಲ್ಲರೂ ಸ್ಪಾಟ್‌ ಡೆತ್‌ ಎಂತಲೇ ಅಂದುಕೊಂಡಿದ್ದರು. ಆದರೆ ಸವಾರರು ಪವಾಡ ಸದೃಶ್ಯ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದರು.

ಸಾರಿಗೆ ಬಸ್ ಶಹಾಪುರದಿಂದ ಸೊಲ್ಲಾಪುರಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಈ ವೇಳೆ ಗಂಗುನಾಯಕ ತಾಂಡಾದಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ಬೈಕ್ ಸವಾರರು ನೇರವಾಗಿ ಬಸ್‌ಗೆ ಗುದ್ದಿ, ಬಸ್ಸಿನಡಿ ಸಿಲುಕಿದರು. ಕೂಡಲೇ ಚಾಲಕ ಬ್ರೇಕ್‌ ಹಾಕಿ ಬಸ್‌ ನಿಲ್ಲಿಸಿ ನೋಡಿದಾಗ ಸವಾರರಿಬ್ಬರು ಸಿಲುಕಿದ್ದರು.

ಹೊರಗೆ ಬರಲು ಆಗದೆ ನರಳಾಡುತ್ತಿದ್ದ ಸವಾರರನ್ನು ಹೊರ ಎಳೆಯಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಿಲಿಲ್ಲ. ಗಾಯಗೊಂಡು ಒದ್ದಾಡುತ್ತಿದ್ದ ಸವಾರರನ್ನು ರಕ್ಷಿಸಲು ಸ್ಥಳೀಯರು, ಪ್ರಯಾಣಿಕರು ಹರಸಾಹಸವೇ ಪಟ್ಟಿದ್ದರು. ಕೊನೆ ಪ್ರಯತ್ನವಾಗಿ ಸವಾರರನ್ನು ರಕ್ಷಿಸಲು ಜನರು ಬಸ್‌ ಅನ್ನೇ ಪಲ್ಟಿ ಮಾಡಿದರು.

ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ, ಬಳಿಕ ಎಲ್ಲರೂ ಸೇರಿ ಬಸ್ ಪಲ್ಟಿ ಮಾಡಿದ್ದಾರೆ. ನಂತರ ಬಸ್ಸಿನಡಿ ಸಿಲುಕಿ ಒದ್ದಾಡುತ್ತಿದ್ದ ಸವಾರರನ್ನು ಬೈಕ್‌ ಸಮೇತ ಹೊರ ತೆಗೆದಿದ್ದಾರೆ. ಗಾಯಾಳಿಬ್ಬರನ್ನು ಕೂಡಲೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರ ರಕ್ಷಣೆ ಕಾರ್ಯಾಚರಣೆ ಬಳಿಕ ಕ್ರೇನ್‌ ಮೂಲಕ ಪಲ್ಟಿ ಮಾಡಿದ್ದ ಬಸ್‌ನ್ನು ಮೇಲಕ್ಕೆ ಎತ್ತಿದ್ದಾರೆ.

ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಯಾಣಿಕರು ಒಂದು ಗಂಟೆಗೂ ಹೆಚ್ಚು ಸಮಯ ಪರದಾಡುವಂತಾಯಿತು. ಮತ್ತೊಂದು ಕಡೆ ಬಾಣತಿಹಾಳ್ ಸುತ್ತಮುತ್ತ ಜನರು ಸೇರಿದ ಕಾರಣಕ್ಕೆ ಸಂಚಾರ ದಟ್ಟಣೆ ಉಂಟಾಗಿತ್ತು.

ಗಾಳಿ ಮಳೆಗೆ ಪಲ್ಟಿಯಾದ ಟಿಪ್ಪರ್‌ ಲಾರಿ

ಚಿಕ್ಕಮಗಳೂರಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಇಲ್ಲಿನ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯು ಪಲ್ಟಿಯಾಗಿದೆ. ಎಂ ಸ್ಯಾಂಡ್ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿಯಾಗಿದ್ದರಿಂದ ಮರುಳು ಎಲ್ಲ ನೆಲದಪಾಲಾಗಿತ್ತು. ಇತ್ತ ಟಿಪ್ಪರ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version