ಶಿವಮೊಗ್ಗ: ರಾಜ್ಯದ ಹಲವೆಡೆ ಭಾನುವಾರ ಅವಘಡಗಳದ್ದೇ ಸದ್ದು. ರಜೆಯ ಮಜಾದಲ್ಲಿ ಮೈಮರೆತಿದ್ದ ಕೆಲವರು ನೀರುಪಾಲಾದರೆ ಅಪಘಾತ ಕೆಲವರ ಪ್ರಾಣವನ್ನೇ ಕಸಿದುಕೊಂಡಿದೆ. ಈ ನಡುವೆ, ಬೈಕ್‌ನಲ್ಲಿ ಸಾಗುತ್ತಿದ್ದ ಯುವಕ ಮತ್ತು ಯುವತಿ ಆಕ್ಸಿಡೆಂಟ್‌ನಲ್ಲಿ (Road accident) ಪ್ರಾಣ ಕಳೆದುಕೊಂಡಿದ್ದಾರೆ. ಆಗುಂಬೆ ಘಾಟಿಯಲ್ಲಿ (Agumbe Ghat) ಬಸ್ ಮತ್ತು ಬೈಕ್‌ಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ಯುವಕ ಮತ್ತು ಯುವತಿ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿಯ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಮತ್ತು ಶಿವಮೊಗ್ಗ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದುಕೊಂಡಿವೆ.
ಘಟನೆಯಲ್ಲಿ ಬೈಕ್ ಸವಾರ, ಹಿಂಬದಿ ಕುಳಿತಿದ್ದ ಯುವತಿ ಸಾವನ್ನಪ್ಪಿದ್ದಾರೆ. ಈ ಯುವಕ ಮತ್ತು ಯುವತಿ ಬಾರ್ಕೂರು ಮೂಲದವರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಸ್ಥಳಕ್ಕೆ ಆಗುಂಬೆ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ತುಂಗಾ ನದಿಗಿಳಿದ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲು
ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದಲ್ಲಿರುವ ತುಂಗಾ ನದಿಗೆ ಇಳಿದಿದ್ದ (Drowned in river) ಇಬ್ಬರು ಉಪನ್ಯಾಸಕರು ನೀರುಪಾಲಾಗಿದ್ದಾರೆ. ಪುನೀತ್(38), ಬಾಲಾಜಿ(36) ನೀರುಪಾಲಾದ ಉಪನ್ಯಾಸಕರು.
ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಇವರು ತೀರ್ಥಮತ್ತೂರು ಗ್ರಾಮಕ್ಕೆ ಬಂದಿದ್ದರು. ತೀರ್ಥಮತ್ತೂರು ಮಠದ ಬಳಿಯ ಹೋಮ್ ಸ್ಟೇನಲ್ಲಿ ವಾಸ್ತವ್ಯ ಇದ್ದರು. ನದಿಗೆ ಇಳಿದು ಈಜಾಡಲು ಹೋದವರು ಹೊರ ಬರಲು ಆಗದೆ ಮುಳುಗಿ (ಜೂ.18) ಮೃತಪಟ್ಟಿದ್ದಾರೆ. ಸದ್ಯ ಒಬ್ಬರ ಮೃತದೇಹ ಪತ್ತೆ ಆಗಿದ್ದು, ಇನ್ನೊಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕೊಪ್ಪದ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಶಿವಮೊಗ್ಗದ ಶಿಕಾರಿಪುರ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೊಪ್ಪದ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಗಾಂಧಿನಗರ ಗ್ರಾಮದ ಮನ್ಸೂರ್ ಸಾಬ್ ಬಿನ್ ಅಲಿ ಚಂದ್ ಸಾಬ್ ಮೃತದುರ್ದೈವಿ. ಮೃತದೇಹ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಬಿ ವೈ ವಿಜಯೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪರಿಹಾರ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.
ಕೆರೆಯಲ್ಲಿ ಈಜಾಡಲು ಹೋದ ನಾಲ್ವರು ನೀರುಪಾಲು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅಮಾನಿಕೆರೆಯಲ್ಲಿ ಮೂವರು ಬಾಲಕರು (Drowned in river) ನೀರುಪಾಲಾಗಿದ್ದಾರೆ. ಕಾರ್ತಿಕ್ (16), ಧನುಷ್ (15), ಗುರುಪ್ರಸಾದ್ (6) ಮೃತ ದುರ್ದೈವಿಗಳು.
ಶನಿವಾರ ಮಧ್ಯಾಹ್ನ ಶಾಲೆ ಮುಗಿದ ಬಳಿಕ ಮೂವರು ಬಾಲಕರು ನಾಪತ್ತೆ ಆಗಿದ್ದರು. ರಾತ್ರಿಯೆಲ್ಲ ಪೋಷಕರು ಬಾಲಕರಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಬಾಲಕರ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಕೆರೆಯಲ್ಲಿ ಬಾಲಕನೊಬ್ಬನ ಮೃತದೇಹ ಪತ್ತೆಯಾಗಿತ್ತು.
ಕೂಡಲೆ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಶೋಧ ಕಾರ್ಯ ನಡೆಸಿದಾಗ ಮತ್ತಿಬ್ಬರು ಬಾಲಕರ ಮೃತದೇಹವು ಪತ್ತೆಯಾಗಿದೆ. ನೀರಿನಲ್ಲಿ ಆಟವಾಡಲು ಹೋಗಿ ಮೂವರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಮೂವರ ಮೃತ ದೇಹಗಳನ್ನು ಹೊರ ತೆಗೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Free Bus service: ಜನರಿಗೆ ಧರ್ಮದ ದಾರಿ ತೋರಿದ ಫ್ರೀ ಬಸ್; ಪ್ರಿಯಾಂಕ್ ಖರ್ಗೆ ಹೊಸ ವ್ಯಾಖ್ಯಾನ