ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನ ಆಲಗೂಡು ಗ್ರಾಮದ ಬಳಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಪೆ ಆಟೋ ಪಲ್ಟಿ (Road Accident) ಆಗಿದೆ. 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾಗಿದ್ದರೆ, ಮೂವರು ಮಕ್ಕಳು ಗಂಭೀರಗೊಂಡಿದ್ದಾರೆ.
ಗಾಯಗೊಂಡ ಶಾಲಾ ಮಕ್ಕಳಿಗೆ ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಗಂಭೀರ ಗಾಯಗೊಂಡ ಮೂವರು ಮಕ್ಕಳು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಿ.ನರಸೀಪುರದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಅತಿ ವೇಗ ಚಾಲನೆ ಕಾರಣ ಎಂದು ಶಂಕಿಸಲಾಗಿದೆ.
ಮಿನಿ ಬಸ್ ಜಖಂ, ಚಾಲಕ ಮೃತ್ಯು
ತುಮಕೂರಿನ ಮಧುಗಿರಿ ತಾಲೂಕಿನ ಜಡೆಗೊಂಡನಹಳ್ಳಿ ಬಳಿ ಅಪಘಾತದಲ್ಲಿ ಮಿನಿ ಬಸ್‌ವೊಂದು ಛಿದ್ರ ಛಿದ್ರವಾಗಿದೆ. ಮಿನಿ ಬಸ್‌ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಗ್ಗಿಹಳ್ಳಿ ಮೂಲದ ಚಾಲಕ ಸಂಜೀವಯ್ಯ (35) ಮೃತಪಟ್ಟಿದ್ದಾರೆ. ಮಿನಿ ಬಸ್‌ನಲ್ಲಿದ್ದ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಹಿಟ್ ಆ್ಯಂಡ್ ರನ್‌ಗೆ ಒಬ್ಬ ಬಲಿ
ಬೆಂಗಳೂರು: ರಾಜಧಾನಿಯ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾರೆ. ಡಿಕ್ಕಿ ಹೊಡೆದ ವಾಹನ ನಿಲ್ಲಿಸದೆ (Hit and Run) ಪರಾರಿಯಾಗಿದೆ.
ನಗರದ ಮೈಸೂರು ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಮಾರು ಅರವತ್ತು ವರ್ಷದ ಈ ವ್ಯಕ್ತಿಯ ವಿವರಗಳು ತಿಳಿದುಬಂದಿಲ್ಲ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದ್ದು, ಕೆ. ಆರ್ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ
ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ಮೈಮೇಲೆ ಹರಿದು ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೆಂಗೇರಿ ಉಪನಗರದ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ವೇಳೆ ಪದ್ಮಲತ (73) ಅವರ ಮೇಲೆ ಬಿಎಂಟಿಸಿ ಹರಿದಿತ್ತು.
ಅಜಾಗರೂಕತೆಯಿಂದ ಬಸ್ ಡ್ರೈವ್ ಮಾಡಿ ವೃದ್ಧೆಯ ಎರಡು ಕಾಲುಗಳ ಮೇಲೆ ಚಾಲಕ ಬಸ್ ಹರಿಬಿಟ್ಟಿದ್ದ. ಜೂನ್ 24ರಂದು ಸಂಜೆ 5 ಗಂಟೆಗೆ ಘಟನೆ ನಡೆದಿತ್ತು. ಅಪಘಾತ ನಡೆದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ವೃದ್ಧೆಯನ್ನು ಪೊಲೀಸರು ರವಾನಿಸಿದ್ದರು. ಎರಡು ಕಾಲುಗಳಿಗೆ ತೀವ್ರವಾಗಿ ಗಾಯವಾದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವಿಗೀಡಾಗಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಡ್ರೈವರ್ ವಿರುದ್ಧ 279, 338, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime News: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ!
ಸರಗಳ್ಳತನಕ್ಕೆ ವಿಫಲ ಯತ್ನ
ಬೆಂಗಳೂರು: ವಿದ್ಯಾರಣ್ಯಪುರ ವೈನಿಧಿ ಥಿಯೇಟರ್ ಬಳಿ ದುಷ್ಕರ್ಮಿಯೊಬ್ಬ ಸರಗಳ್ಳತನಕ್ಕೆ (chain snatching) ವಿಫಲ ಪ್ರಯತ್ನ ನಡೆಸಿದ್ದಾನೆ. ವಾಹನ ಬಳಸದೆ ಸರಗಳವಿಗೆ ಯತ್ನಿಸಿದ ದುಷ್ಕರ್ಮಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಪ್ನಾ ಎಂಬ ಮಹಿಳೆ ತಾಯಿ ಹಾಗು ಚಿಕ್ಕಮ್ಮನ ಜೊತೆ ನಿನ್ನೆ ಸಂಜೆ 7.30ರ ಸಮಯ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಕಳ್ಳ ಸರಗಳ್ಳತನಕ್ಕೆ ಯತ್ನಿಸಿದ್ದು, ಹಿಡಿಯಲು ಹೋದಾಗ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ