Site icon Vistara News

Road Accident : ಬೆಂಗಳೂರಲ್ಲಿ ನಿರ್ಲಕ್ಷ್ಯ ಚಾಲನೆಗೆ ಬೀದಿ ಹೆಣವಾದ ಬೈಕ್‌ ಸವಾರ

Road Accident in Bengaluru Rider dead

ಬೆಂಗಳೂರು/ಗದಗ: ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ನಿರ್ಲಕ್ಷ್ಯ ಚಾಲನೆಗೆ ಸವಾರರು ತಮ್ಮ ಪ್ರಾಣವನ್ನು (Road Accident) ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಲ್ಲಿ ಸವಾರನೊಬ್ಬ ನಿರ್ಲಕ್ಷ್ಯದಿಂದ ದ್ವಿಚಕ್ರ ವಾಹನ ಚಲಾಯಿಸಿ ಮೃತಪಟ್ಟಿದ್ದಾರೆ. ಕೊಮ್ಮಘಟ್ಟ ಸರ್ಕಲ್‌ನಿಂದ ಕೊಮ್ಮಘಟ್ಟ ಮಾರ್ಗವಾಗಿ ಸಾಗುವಾಗ ಈ ಅಪಘಾತ ನಡೆದಿದೆ.

ರಾಮಮೂರ್ತಿ (32) ಎಂಬಾತ ಸ್ವಯಂ ಅಪಘಾತಕ್ಕೆ ಪ್ರಾಣ ಕಳೆದುಕೊಂಡವರು. ಸ್ಕೂಟರ್‌ನಲ್ಲಿ ಬರುತ್ತಿದ್ದ ರಾಮಮೂರ್ತಿ ವೇಗವಾಗಿ ವಾಹನ ಚಲಾಯಸಿದ್ದಾರೆ. ಈ ವೇಳೆ ನಿಯಂತ್ರಣ ಸಿಗದೇ ಗಾಡಿ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಸನೈರ ಆಸ್ಪತ್ರೆಗೆ ರಾಮಮೂರ್ತಿ ಅವರನ್ನು ರವಾನೆ ಮಾಡಿದ್ದಾರೆ. ಆದರೆ ಹೆಚ್ಚಿನ ಚಿಕೆತ್ಸೆಗೆ ಆರ್‌.ಆರ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಮೃತ ಪಟ್ಟಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಮ್ಮಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:Kidnapping Case : ಬಸ್‌ನಲ್ಲಿ ಅಪರಿಚಿತರ ಕೈಗೆ ಕೊಟ್ಟ ಮಗು ಮಿಸ್ಸಿಂಗ್‌; ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಪೊಲೀಸರು

ಟ್ರ್ಯಾಕ್ಟರ್‌ ಪಲ್ಟಿ; ಸವಾರ ಅಪಾಯದಿಂದ ಪಾರು

ಕಬ್ಬು ತುಂಬಿಸಿಕೊಂಡು ಹೊರಟ್ಟಿದ್ದ ಟ್ರ್ಯಾಕ್ಟರ್ ವಾಹನವು ಪಲ್ಟಿಯಾಗಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಲಖಮಾಪೂರ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಲಖಮಾಪೂರದಿಂದ ಕುಳಗೇರಿ ಬಳಿ ಇರುವ ನಿರಾಣಿ ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಸಿಕೊಂಡು ಹೋಗುವಾಗ ಇಕ್ಕಟ್ಟಾದ ಬ್ರಿಡ್ಜ್ ಬಳಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅತಿವೇಗ ತಂದ ಆಪತ್ತು; ಟಿಪ್ಪರ್‌ ಲಾರಿಗೆ ಕಾರು ಡಿಕ್ಕಿ

ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಟಿಪ್ಪರ್ ಲಾರಿ ಹಾಗೂ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರ್ಕಲ್ ಕ್ರಾಸ್ ಮಾಡುವಾಗ ಎರಡೂ ವಾಹನಗಳು ಅತೀ ವೇಗವಾಗಿ ಬಂದಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಜನವರಿ 4 ರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿದ್ದವರು ಗದಗ ನಗರದ ದಾಸರ ಓಣಿ, ವಿಜಯನಗರ ಕಾಲೋನಿ ನಿವಾಸಿಗಳಾಗಿದ್ದಾರೆ. ಮಂಜುನಾಥ ಭಾಂಡಗೆ, ಸಂಜಿತ್ ಬೇವಿನಕಟ್ಟಿ, ರಾಘವೇಂದ್ರ ಕಟವಾಟೆ, ಕುಶಾಲ್ ಬೇವಿನಕಟ್ಟಿ ಗಾಯಾಳುಗಳು ತಿಳಿದು ಬಂದಿದೆ. ಸದ್ಯ ಶಿರಹಟ್ಟಿ ಮೂಲದ ಟಿಪ್ಪರ್ ಚಾಲಕ ಅನ್ನಪ್ಪ ಬಳ್ಳಾರಿ ಎಂಬುವವರ ಮೇಲೆ ಪ್ರಕರಣ‌ ದಾಖಲಾಗಿದೆ. ರಾತ್ರಿ ಬಿಂಕದಕಟ್ಟಿಯ ಡಾಬಾವೊಂದರಲ್ಲಿ ಊಟ ಮುಗಿಸಿ ಮರಳುವಾಗ ಘಟನೆ ನಡೆದಿದೆ. ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version