ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ (Road Accident) ಮೃತಪಟ್ಟಿರುವ ದಾರುಣ ಘಟನೆ ತುಮಕೂರಿನ ಪಾವಗಡ ಪಟ್ಟಣದ ಕೃಷ್ಣಗಿರಿ ಕ್ರಾಸ್ ಬಳಿ ನಡೆದಿದೆ. ಗೋವಿಂದಪ್ಪ (38) ಮೃತ ಸವಾರ ಎಂದು ತಿಳಿದು ಬಂದಿದೆ.
ಗೋವಿಂದಪ್ಪ ವೀರಲಗೊಂದಿ ಗ್ರಾಮದವರಾಗಿದ್ದು, ಬೈಕ್‌ನಲ್ಲಿ ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕುರುಳಿದ ಗೋವಿಂದಪ್ಪ ತಲೆಗೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪಾವಗಡ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಕಾರು, ಸಜೀವ ದಹನಗೊಂಡ ಚಾಲಕ
ಚಾಮರಾಜನಗರದ ಗುಂಡ್ಲುಪೇಟೆಯ ಹಿರೀಕಾಟಿ ಗೇಟ್ ಬಳಿ ಕಾರೊಂದು ಬೆಂಕಿಯಿಂದ ಹೊತ್ತಿ ಉರಿದು (Car Accident), ಚಾಲಕ ಸಜೀವ ದಹನವಾಗಿದ್ದಾನೆ. ಶನಿವಾರ ರಾತ್ರಿ 10-45ರ ಹೊತ್ತಿಗ ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕಾರಿಗೆ ಒಂದು ಟ್ರಕ್ ಡಿಕ್ಕಿಯಾಗಿದೆ (Road Accident). ಈ ಡಿಕ್ಕಿ ರಭಸಕ್ಕೆ ಕಾರು ಮತ್ತು ಟ್ರಕ್ ಎರಡೂ ಬೆಂಕಿಯಿಂದ ಹೊತ್ತಿ ಉರಿದಿವೆ. ಈ ವೇಳೆ ಕಾರು ಚಾಲಕ ಮಿಜಾಮಿಲ್ಲ ಅಹಮದ್ (35) ಅವರು ಸಜೀವ ದಹನಗೊಂಡಿದ್ದಾರೆ. ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಶಪಥ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ
ಮಂಡ್ಯ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಜು.1ರಂದು ಇಂಥದ್ದೇ ಒಂದು ಘಟನೆ ನಡೆದಿತ್ತು. ಪಿರಾನ್ ಎಂಬುವರು ಮಕ್ಕಳೊಂದಿಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಶ್ರೀರಂಗಪಟ್ಟಣದ ಗೌರಿಪುರ ಗೇಟ್ ಬಳಿ ಕಾರಿನ ಎಂಜಿನ್ನಲ್ಲಿ ಸಣ್ಣದಾಗಿ ಹೊಗೆ ಏಳಲು ಶುರುವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಿರಾನ್ ಕಾರು ನಿಲ್ಲಿಸಿದ್ದವರು. ಅಲ್ಲೇ ಸುತ್ತಮುತ್ತ ಇದ್ದವರೆಲ್ಲ ಅಲ್ಲಿಗೆ ಬಂದು ಮಕ್ಕಳನ್ನೆಲ್ಲ ಕಾರಿನಿಂದ ಇಳಿಸಿದ್ದರು. ನೋಡನೋಡುತ್ತಿದ್ದಂತೆ ಕಾರು ದಹಿಸಿಹೋಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದ್ದರು. ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Suicide Cases: ಆನ್ಲೈನ್ ಆಟದ ಗೀಳು; ನಷ್ಟಕ್ಕೆ ಸಿಲುಕಿದ ಶಿರಸಿ ಯುವಕ ಆತ್ಮಹತ್ಯೆ
ರಾಯಚೂರಲ್ಲಿ ಬೈಕ್ಗಳ ಡಿಕ್ಕಿ, ಸವಾರ ಸಾವು
ರಾಯಚೂರು: ಇಲ್ಲಿನ ದೇವದುರ್ಗ ಪಟ್ಟಣದ ಹೊರವಲಯಲ್ಲಿ ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಒಂದು ಬೈಕ್ನ ಸವಾರ ಬಸವರಾಜ್ (23) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೊಂದು ಬೈಕ್‌ನಲ್ಲಿ ಇದ್ದ ರಾಜು ಮತ್ತು ಅಮರೇಶ್ ಎಂಬುವರಿಗೆ ಗಂಭೀರ ಗಾಯಳಾಗಿವೆ. ಇನ್ನು ಈ ಬಸವರಾಜ್ ಜತೆ ಅವನ ಬೈಕ್‌ನಲ್ಲಿ ಇನ್ನಿಬ್ಬರು ಇದ್ದರು. ಅವರಿಗೂ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ