Site icon Vistara News

Road Accident: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮತ್ತೆ ಅಪಘಾತ; ಇಬ್ಬರ ಸಾವು

ramanagar accident

ರಾಮನಗರ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ (Bangalore Mysore Expressway) ಅಪಘಾತಗಳ ತಾಣವಾಗುತ್ತಿದೆ ಎಂಬ ಆತಂಕದ ನಡುವೆ, ಬುಧವಾರ ಮತ್ತೊಂದು ಅಪಘಾತ (Road Accident) ಸಂಭವಿಸಿದೆ. ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್‌ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿ ಬಿಡದಿ ಸಮೀಪದ ಕೆಂಪನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಮೃತರನ್ನು ಸನಾವುಲ್ಲಾ ಬೇಗಂ (65), ನೂರ್ ಜಹಾನ್ (60) ಎಂದು ಗುರುತಿಸಲಾಗಿದೆ. ಇಬ್ಬರೂ ಬೆಂಗಳೂರಿನ ಬಾಪೂಜಿ ನಗರದ ನಿವಾಸಿಗಳು. ಕಾರ್ಯಕ್ರಮ ನಿಮಿತ್ತ ರಾಮನಗರಕ್ಕೆ ಬಂದಿದ್ದ ಇವರು ಹಿಂದಿರುಗುತ್ತಿದ್ದಾಗ ಕೆಟ್ಟು ನಿಂತಿದ್ದ ಲಾರಿ ಕಾಣದೆ ವೇಗವಾಗಿ ಬಂದು ಅಪ್ಪಳಿಸಿದ್ದಾರೆ ಎಂದು ತರ್ಕಿಸಲಾಗಿದೆ. ಸ್ಥಳಕ್ಕೆ‌ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಜರಾಜೇಶ್ವರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.

ಬಸ್‌ ಡಿಕ್ಕಿ, ಬೈಕ್‌ ಸವಾರರಿಬ್ಬರ ಸಾವು

ರಾಮನಗರ ವ್ಯಾಪ್ತಿಯಲ್ಲಿ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಮತ್ತಿಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಮೃತಪಟ್ಟಿದ್ದಾರೆ.

ಮಾಗಡಿ ನಗರದ ಸೋಮೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ. ಮೃತರನ್ನು ಮಾಗಡಿಯ ರಾಜೀವ್ ಗಾಂಧಿ‌ ನಗರದ ನಿವಾಸಿಗಳಾದ ಪ್ರಶಾಂತ್ (22) ಹಾಗೂ ರಾಜು (45) ಎಂದು ಗುರುತಿಸಲಾಗಿದೆ. ಮಾಗಡಿಯಿಂದ ಕುಣಿಗಲ್‌ಗೆ ಹೋಗುತ್ತಿದ್ದ ಖಾಸಗಿ ಬಸ್, ಕೆಲಸ ಮುಗಿಸಿಕೊಂಡು ‌ಮನೆಗೆ ಹೋಗುತ್ತಿದ್ದ ಸವಾರರ ಬೈಕ್‌ಗೆ ಡಿಕ್ಕಿಯಾಗಿದೆ. ಮಾಗಡಿ ‌ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Wheeling Menace: ಪುಂಡರ ವ್ಹೀಲಿಂಗ್‌ ಹುಚ್ಚಾಟದಿಂದ ಭೀಕರ ಅಪಘಾತ, ಸಾವು ಬದುಕಿನ ನಡುವೆ ಯುವತಿಯರು

Exit mobile version