Site icon Vistara News

Road Accident: ಬೈಕ್‌ ಸವಾರರಿಬ್ಬರ ಜೀವ ತೆಗೆದ ಅಪಘಾತ

Road Accident

ವಿಜಯಪುರ/ಮೈಸೂರು: ಬೈಕ್ ಮತ್ತು ಹೆಚ್‌.ಪಿ ಟ್ಯಾಂಕರ್ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಅಸುನೀಗಿರುವ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟಿರುವ ಬೈಕ್ ಸವಾರನ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಅಪಘಾತದ ಬಳಿಕ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ವಿಜಯಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅಪರಿಚಿತ ವಾಹನಕ್ಕೆ ಸವಾರ ಬಲಿ

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರಿನ ತಿ.ನರಸೀಪುರ- ನಂಜನಗೂಡು ಮುಖ್ಯರಸ್ತೆಯ ಅಲಸ್ತ್ರಿಕಟ್ಟೆಹುಂಡಿ ಬಳಿ ನಡೆದಿದೆ. ಪ್ರವೀಣ್ (26) ಮೃತ ದುರ್ದೈವಿ.

ತಿ. ನರಸೀಪುರ ತಾಲೂಕಿನ ಬನ್ನಳ್ಳಿ ಹುಂಡಿ ಗ್ರಾಮದ ನಿವಾಸಿಯಾಗಿರುವ ಪ್ರವೀಣ್‌, ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಪಘಾತ ನಡೆದಿದೆ. ಸ್ಥಳಕ್ಕೆ ಕುದೇರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Datta Jayanti : ಶೋಭಾ ಯಾತ್ರೆಯಲ್ಲಿ ಪೊಲೀಸರ ಮೇಲೆ ಹಲ್ಲೆ; ಭಜರಂಗದಳ ಕಾರ್ಯಕರ್ತರ ಮೇಲೆ ಕೇಸ್‌

ಪ್ರವಾಸಕ್ಕೆ ಹೊರಟ್ಟಿದ್ದ ಶಾಲಾ ವಾಹನ ಪಲ್ಟಿ

ಖಾಸಗಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ವಾಹನವು ಪಲ್ಟಿಯಾಗಿದೆ. ಗದಗ ನಗರದ ಮಲ್ಲಸಮುದ್ರದ ಬಳಿ ಅಪಘಾತ ನಡೆದಿದೆ. ಖಾಸಗಿ ಶಾಲಾ ಮಕ್ಕಳು ಹಾವೇರಿಯ ಗೋಟಗೋಡಿಗೆ ಪ್ರವಾಸಕ್ಕೆ ಹೋಗಿದ್ದರು. ಗದಗ ತಾಲೂಕಿನ ಜಂತ್ಲಿಶಿರೂರು ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ. ಏಕಾಏಕಿ ರಸ್ತೆ ಬದಿಗೆ ಬಸ್‌ ಪಲ್ಟಿಯಾಗಿದೆ.

ಅಂದಾಜು 25ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು ವಾಹನದಲ್ಲಿದ್ದರು. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಿಂದ ಎಲ್ಲರೂ ಪಾರಾಗಿದ್ದಾರೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಲ್ಟಿಯಾದ ವಾಹನವನ್ನು ತೆರವು ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಕಬ್ಬು ತುಂಬಿದ ಟ್ರಾಕ್ಟರ್‌ಗೆ ಕಾರು ಡಿಕ್ಕಿ

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಕಬ್ಬು ತುಂಬಿದ ಟ್ರಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟ್ರಾಕ್ಟರ್ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಕಾರಿನಲ್ಲಿ ಮೈಸೂರು ಮೂಲದ ಏಳು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಾಕ್ಟರ್‌ನಲ್ಲಿ ತುಂಬಿದ್ದ ಕಬ್ಬುಗಳೆಲ್ಲವೂ ರಸ್ತೆ ಬಿದ್ದ ಪರಿಣಾಮ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ರಸ್ತೆ ಮೇಲೆ ಹರಡಿದ್ದ ಕಬ್ಬು ತೆರವು ಮಾಡಲು ನಾಲ್ಕು ಜೆಸಿಬಿ, ಒಂದು ಇಟ್ಯಾಚ್ ಮಸಿನ್ ಬಳಕೆ ಮಾಡಲಾಯಿತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಟ್ರಾಕ್ಟರ್ ಚಾಲಕ ಕುಮಾರ ಹುಕ್ಕೇರಿ ಅವರನ್ನು ಗೋಕಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರಲ್ಲಿ ಕುರಿಗಳ ಮೇಲೆ ಹರಿದ ಲಾರಿ

ರಾಯಚೂರು ನಗರದ ಬೈಪಾಸ್ ರಸ್ತೆಯಲ್ಲಿ ಕುರಿಗಳ ಮೇಲೆ ಲಾರಿ ಹರಿದ ಪರಿಣಾಮ 31 ಕುರಿಗಳು ಮೃತಪಟ್ಟಿವೆ. 7 ಕುರಿಗಳು ಗಾಯಗೊಂಡಿವೆ. ಕುರಿಗಳು ಗದ್ವಾಲ್ ಮೂಲದ ತಿಮ್ಮಪ್ಪ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version