Site icon Vistara News

Road accident : ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಸರ್ಕಾರಿ ಬಸ್ :‌ 40ಕ್ಕೂ ಅಧಿಕ ಪ್ರಯಾಣಿಕರು ಪಾರು

Bus accident

#image_title

ಮಡಿಕೇರಿ: ಮುಂಜಾನೆ ದಟ್ಟ ಮಂಜಿನಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ಕಂದಕಕ್ಕೆ ಉರುಳಿದ ಘಟನೆ (Road accident) ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅಮ್ಮತಿ ಕಾವಾಡಿ ಗ್ರಾಮದಲ್ಲಿ ನಡೆದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಹಾಸನ ಜಿಲ್ಲೆ ಡಿಪೋ ವ್ಯಾಪ್ತಿಯ ಬಸ್‌ (ಕೆಎ-೧೩ಎಫ್-೨೩೪೭) ಮಂಗಳವಾರ ಮುಂಜಾನೆ ವಿರಾಜಪೇಟೆ ಅಮ್ಮತಿ ಕಾವಾಡಿ ಗ್ರಾಮದ ತಿರುವಿನಲ್ಲಿ ಕಂದಕಕ್ಕೆ ಬಿದ್ದಿದೆ.

ಈ ಬಸ್‌ ಕೇರಳದ ಎರ್ನಾಕುಲಂನಿಂದ ವಿರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ತೆರಳುತಿತ್ತು. ಬೆಳಗ್ಗೆ ೪ ಗಂಟೆಯ ಹೊತ್ತಿಗೆ ವಿರಾಜಪೇಟೆ ಬಸ್‌ ನಿಲ್ದಾಣದಿಂದ ಹೊರಟಿದ್ದ ಬಸ್‌ ೪.೨೦ರ ಹೊತ್ತಿಗೆ ಕಾವಾಡಿ ಗ್ರಾಮ ತಲುಪಿದಾಗ ದುರಂತ ನಡೆದಿದೆ.

ಅಪಘಾತ ನಡೆದ ಜಾಗದಲ್ಲಿ ರಸ್ತೆಯ ಬಲಭಾಗದಲ್ಲಿ ಕೆರೆಯೊಂದಿದೆ. ಮಂಜಿನಿಂದಾಗಿ ರಸ್ತೆಯು ತೇವಾಂಶದಿಂದ ಕೂಡಿತ್ತು ಎನ್ನಲಾಗಿದೆ. ಈ ವೇಳೆಯಲ್ಲಿ ವಾಹನವು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿತು ಎಂದು ಗಾಯಳು ಒಬ್ಬರು ಮಾಹಿತಿ ನೀಡಿದ್ದಾರೆ.

ಬಸ್ಸಿನಲ್ಲಿ ಸುಮಾರು ೪೦ ಮಂದಿ ಪ್ರಯಾಣಿಕರು ಇದ್ದರು. ಅವಘಡದಿಂದ ಪ್ರಯಾಣಿಕರು ಸೇರಿದಂತೆ ಬಸ್‌ ಚಾಲಕ ಮತ್ತು ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಲಿಲ್ಲ. ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Road Accident: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಾಬಾಗೆ ನುಗ್ಗಿದ ಟಿಪ್ಪರ್‌: ಒಬ್ಬರು ಸಾವು

Exit mobile version