ದಕ್ಷಿಣ ಕನ್ನಡ (ಕಡಬ): ಇಲ್ಲಿನ ಕಡಬದ ಬಿಳಿನೆಲೆ ಸಮೀಪ ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರಿನೊಳಗೆ ಇದ್ದ ನಾಲ್ವರು ಮೃತಪಟ್ಟಿದ್ದು, ತೂಫಾನ್ ವಾಹನದಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಆಲ್ಟೋ ಕಾರಲ್ಲಿದ್ದ ಇಬ್ಬರು ಪುರುಷರು ಸೇರಿದಂತೆ ಮಹಿಳೆ ಮತ್ತು ಒಂದು ಮಗುವೊಂದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಮೃತರು ಬೇಲೂರು ಮೂಲದವರು ಎಂದು ತಿಳಿದಿದ್ದು, ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ತೂಫಾನ್ ವಾಹನವು ಹಾಸನ ಕಡೆಯದ್ದು ಎನ್ನಲಾಗಿದೆ. ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತಕ್ಕೆ ಅತಿ ವೇಗದ ಚಾಲನೆ ಕಾರಣವೆಂದು ಹೇಳಲಾಗುತ್ತಿದೆ.
ರಸ್ತೆ ಅಪಘಾತದಲ್ಲಿ ಸವಾರ ಮೃತ್ಯು
ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ರಸ್ತೆ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ. ಮೈಸೂರು ತಾಲೂಕಿನ ಕಡಕೊಳ ಬಳಿ ಸವಾರರೊಬ್ಬರು ತಮ್ಮ ಸ್ಕೂಟರ್ ಬಳಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಒಮಿನಿಯೊಂದು ಮೊದಲು ಬ್ಯಾರಿಕೇಡ್‌ಗೆ ಗುದ್ದಿ, ನಂತರ ಸ್ಕೂಟರ್, ಕಾರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಗುರುತು ಪತ್ತೆ ಆಗಿಲ್ಲ. ಇತ್ತ ಒಮಿನಿ ಚಾಲಕ ಗಾಯಗೊಂಡಿದ್ದು, ಒಳಗೆ ಸಿಲುಕಿ ನರಳಾಡುತ್ತಿದ್ದವನನ್ನು ಸ್ಥಳೀಯರು ರಕ್ಷಿಸಿದ್ದಾರೆ.