ಮಂಡ್ಯ: ಇಲ್ಲಿನ ಶಿವಳ್ಳಿ ಠಾಣಾ ವ್ಯಾಪ್ತಿಯ ತಿಬ್ಬನಹಳ್ಳಿ ಬಳಿಯಿರುವ ವಿಸಿ ನಾಲೆಗೆ (Drowned in Canal) ಕಾರು ಬಿದ್ದಿದೆ. ಕಾರು ಚಾಲನೆ ಮಾಡುತ್ತಿದ್ದ ಲೋಕೇಶ್ ಎಂಬಾತ ನೀರಲ್ಲಿ ಕೊಚ್ಚಿ (Road Accident) ಹೋಗಿದ್ದಾರೆ.
ಲೋಕೇಶ್ ಮೈಸೂರಿಗೆ ಹೋಗಲೆಂದು ನಿನ್ನೆ ಬುಧವಾರ ಸ್ನೇಹಿತ ಮೋಹನ್‌ನಿಂದ ಕಾರು ಪಡೆದುಕೊಂಡಿದ್ದರು. ಇಂದು ಕಾರು ವಾಪಾಸ್ ಕೊಡಲು ಶಿವಳ್ಳಿಯಿಂದ ತಿಬ್ಬನಹಳ್ಳಿಗೆ ಹೋಗುವಾಗ ನಿಯಂತ್ರಣ ತಪ್ಪಿ, ಸುಮಾರು 18 ಅಡಿ ಆಳದಲ್ಲಿರುವ ವಿಸಿ ನಾಲೆಗೆ ಬಿದ್ದಿದ್ದಾರೆ.
ನಾಲೆಗೆ ಬಿದ್ದ ಕೂಡಲೇ ಲೋಕೇಶ್ ತನ್ನ ಪ್ರಾಣ ಉಳಿಸಿಕೊಳ್ಳಲು ಕಾರಿನ ಡೋರ್ ತೆರೆದು ಹೇಗೋ ಹೊರ ಬಂದಿದ್ದಾರೆ. ಈಜಲು ಆಗದೆ ಪುನಃ ಕಾರಿನ ಮೇಲೆ ಹತ್ತಿ ಕುಳಿತು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಪಕ್ಕದಲ್ಲೇ ಕಬ್ಬು ತುಂಬುತ್ತಿದ್ದ ವ್ಯಕ್ತಿ ಲೋಕೇಶ್ ಅವರ ಕೂಗಾಟ ಕೇಳಿ ಸ್ಥಳಕ್ಕಾಗಿಮಿಸಿದ್ದಾರೆ. ಈ ವೇಳೆ ರಕ್ಷಣೆಗಾಗಿ ಜನರನ್ನು ಹಾಗೂ ಹಗ್ಗವನ್ನು ತರುತ್ತೇನೆ ಧೈರ್ಯವಾಗಿರಿ ಎಂದು ಹೇಳಿ ಹೋಗಿದ್ದಾರೆ.
ಹಗ್ಗದ ಸಮೇತ ಜನರೊಂದಿಗೆ ಬರುವಷ್ಟರಲ್ಲಿ ಲೋಕೇಶ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಬಳಿಕ ಕೂಡಲೇ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳೀಯರ ನೆರವಿನಿಂದ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕಾರನ್ನು ಮೇಲಕ್ಕೆ ಎತ್ತಲಾಗಿದೆ.
ನಾಲೆಯಲ್ಲಿ ನೀರು ಹೆಚ್ಚಿರುವ ಕಾರಣ ಕೊಚ್ಚಿ ಹೋಗಿರುವ ಲೋಕೇಶ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನಾಲೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ