ಚಿತ್ರದುರ್ಗ/ಬಳ್ಳಾರಿ: ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಕಾರೊಂದು ಪಲ್ಟಿ (Road Accident) ಹೊಡೆದಿದ್ದು, ತೊಗಲು ಗೊಂಬೆ ಕಲಾವಿದರೊಬ್ಬರು ಮೃತಪಟ್ಟಿದ್ದಾರೆ.
ತೊಗಲು ಗೊಂಬೆ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣ (91) ಮೃತಪಟ್ಟವರು. ಬಳ್ಳಾರಿ ಮೂಲದವರಾಗಿದ್ದು, ತೊಗಲುಗೊಂಬೆ ಆಟದ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾರಿನಲ್ಲಿದ್ದ ಅವರ ಪುತ್ರ ಹನುಮಂತಪ್ಪಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಕ್ರೇನ್ ಮೂಲಕ ಎತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಬೆಳಗಲ್ಲು ವೀರಣ್ಣ ಹಿನ್ನೆಲೆ
ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದ ಬೆಳಗಲ್ಲು ಹನುಮಂತಪ್ಪ ಹಾಗೂ ಬೆಳಗಲ್ಲು ವೀರಮ್ಮ ದಂಪತಿಗೆ 1928ರಲ್ಲಿ ಜನಿಸಿದ್ದರು. ತಂದೆ ಬೆಳಗಲ್ಲು ಹನುಮಂತಪ್ಪನವರು ಬಯಲಾಟದ ಮಾಸ್ಟರ್, ವಾಯಿಲಿಟ್ ವಾದಕರಾಗಿದ್ದರು.
ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಬಯಲಾಟಗಳನ್ನು ಆಡಿಸಿ ಕರ್ನಾಟಕ ಜನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು ಹನುಮಂತಪ್ಪ. ತಂದೆಯವರ ಕಲಾ ಪರಂಪರೆಯನ್ನು ವೀರಣ್ಣನವರು ಮೈಗೂಡಿಸಿಕೊಂಡಿದ್ದರು. ಹಲವು ದೇಶದಲ್ಲಿ ತೊಗಲುಗೊಂಬೆ ಪ್ರದರ್ಶನ ಮಾಡಿದ ಬೆಳಗಲ್ ವೀರಣ್ಣ ತಂಡ ತೊಗಲುಗೊಂಬೆಯಾಟದ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ್ದಿದ್ದಾರೆ.
ಐದು ಸಾವಿರ ವರ್ಷಗಳ ಪ್ರಾಚೀನ ಇತಿಹಾಸವಿರುವ ಕರ್ನಾಟಕ ತೊಗಲುಗೊಂಬೆ ಪರಂಪರೆಯನ್ನು ಬೆಳಸಿದ ಕೀರ್ತಿ ಕಲಾವಿದರಾದ ಬೆಳಗಲ್ ವೀರಣ್ಣನವರದ್ದಾಗಿದೆ. ಶ್ರೀರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಅನ್ನು ಅವರು ಸ್ಥಾಪಿಸಿದ್ದರು. ಇಡೀ ಕುಟುಂಬದ ಸದಸ್ಯರೊಂದಿಗೆ ಪಂಚವಟಿ, ಮಹಾತ್ಮ ಗಾಂಧಿ, ಕಿತ್ತೂರು ಚೆನ್ನಮ್ಮ, ಭಾರತ ಸ್ವಾತಂತ್ರ್ಯ ಸಂಗ್ರಾಮ, ಪ್ರವಾದಿ ಬಸವೇಶ್ವರರಂತಹ ಹತ್ತಾರು ತೊಗಲುಗೊಂಬೆ ಆಟಗಳನ್ನು ನಾಡಿನಾದ್ಯಂತ ಪ್ರದರ್ಶನ ಮಾಡಿದ್ದಾರೆ.
ತೊಗಲುಗೊಂಬೆಯಾಟ ಪರಂಪರೆಯಲ್ಲಿ ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯವನ್ನು ಎತ್ತಿ ಹಿಡಿದಿದ್ದಾರೆ. 90ರಲ್ಲೂ ವಯಸ್ಸಿನಲ್ಲೂ ಉತ್ತಮ ಕಂಠಸಿರಿಯನ್ನು ಹೊಂದಿದ್ದರು.
ವೀರಣ್ಣನವರಿಗೆ ಸಂದ ಪ್ರಶಸ್ತಿಗಳು:
- ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ (2000)
- ಜಾನಪದ ಶ್ರೀ ಪ್ರಶಸ್ತಿ (2007)
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1992)
- ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012)
- ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ (2013)
- ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ ಇವರು ‘ಬಸವ ಬೆಳಗು’ ಪ್ರಶಸ್ತಿ (2021)
ಹಿರಿಯೂರು ಬಳಿ ಬಸ್, ಟಾಟಾ ಏಸ್, ಲಾರಿಗಳ ಸರಣಿ ಅಪಘಾತ; ಒಬ್ಬ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ಹಿರಿಯೂರು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆದಿವಾಲ ಬಳಿ ತಡರಾತ್ರಿ ಕೆಎಸ್ಸಾರ್ಟಿಸಿ ಬಸ್, ಟಾಟಾ ಏಸ್, ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ, ಒಬ್ಬರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಗದಗ ಟಾನ್ ನಿವಾಸಿ ಸೈಯದ್ ಮುಜಾಹಿದ್ದೀನ್ (40) ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗದಿಂದ ಬಸ್ ಬೆಂಗಳೂರು ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸಪ್ತಪದಿ ತುಳಿದ ಹತ್ತೇ ದಿನಕ್ಕೆ ಮಸಣ ಸೇರಿದ ನವ ದಂಪತಿ
ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದ ಬಳಿ ಕಾರು ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಕರ ರಸ್ತೆ ಅಪಘಾತ (Road Accident) ನಡೆದಿದ್ದರಿಂದ ಸಪ್ತಪದಿ ತುಳಿದ ಹತ್ತೇ ದಿನಕ್ಕೆ ನವ ದಂಪತಿ ಮಸಣ ಸೇರಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer : ಡಾಲರ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ಕರೆನ್ಸಿಯಾಗಲಿದೆಯೇ ರೂಪಾಯಿ?
ಮಹಾರಾಷ್ಟ್ರ ಮೂಲದ ಇಂದ್ರಜಿತ್ ಮೋಹನ್ ಡಮ್ಮನಗಿ (27), ಕಲ್ಯಾಣಿ ಇಂದ್ರಜಿತ್ ಡಮ್ಮಣಗಿ (24) ಮೃತರು. ನವ ದಂಪತಿ ಶನಿವಾರ ಕಾರಿನಲ್ಲಿ ಬಾದಾಮಿಯ ಬನಶಂಕರಿ ದೇವಿ ದರ್ಶನ ಪಡೆದು ಮರಳಿ ಮನೆಗೆ ತೆರಳುವಾಗ ನಿಪ್ಪಾಣಿ- ಮುದೋಳ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಟ್ಯಾಂಕರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.