ಮೈಸೂರು/ಕೊಡಗು: ಇಲ್ಲಿನ ಬಿಳಿಕೆರೆ ಬಳಿಯ ರಂಗನಕೊಪ್ಪಲು ಗೇಟ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ (Road Accident) ಕೊಡಗಿನ ದಂಪತಿ ಮೃತಪಟ್ಟಿದ್ದಾರೆ. ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ (Car-bus Accident) ಮುಖಾಮುಖಿ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ದಂಪತಿ ಜೀವ ಬಿಟ್ಟಿದ್ದಾರೆ. ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದ ನಿವೃತ್ತ ಪ್ರಾಂಶುಪಾಲರಾದ ಎಚ್.ಬಿ.ಬೆಳ್ಳಿಯಪ್ಪ (66) ಹಾಗೂ ಪತ್ನಿ ವೀಣಾ ಆಸುನೀಗಿದ್ದಾರೆ.
ಮೈಸೂರು- ಹುಣಸೂರು ರಾಷ್ಟ್ರೀಯ ಹೆದ್ದಾರಿಯ ಬಿಳಿಕೆರೆ ಸಮೀಪ ಕಾರಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿಗೆ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಳ್ಳಿಯಪ್ಪ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರೆ, ಪತ್ನಿ ವೀಣಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಟಾಪ್ ಅಪ್ಪಚಿ ಆಗಿದೆ. ಬಿಳಿಕೆರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು ಮೃತದೇಹವನ್ನು ಕಾರಿನಿಂದ ಹೊರೆಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ ರಭಸಕ್ಕೆ ಕಾರು ಪೀಸ್ ಪೀಸ್
ಬೆಂಗಳೂರಿನ ಪಾಪರೆಡ್ಡಿ ಪಾಳ್ಯದ ಬಸ್ ನಿಲ್ದಾಣದ ಸಮೀಪ ವೇಗವಾಗಿ ಬಂದ ಕಾರೊಂದು ಡಿವೈಡರ್‌ಗೆ ಗುದ್ದಿತ್ತು. ಬಳಿಕ ಅದೇ ವೇಗದಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಪಕ್ಕಕ್ಕೆ ಹಾರಿ ನಿಂತ ಕಾರು ಪೀಸ್ ಪೀಸ್ ಆಗಿತ್ತು. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಶನಿವಾರ ಮಧ್ಯರಾತ್ರಿ 12:40 ರ ಸಮಯಕ್ಕೆ ಯಶಸ್ (24) ಎಂಬಾತ ನಾಗರಬಾವಿ ಕಡೆಯಿಂದ ಕೆಂಗೇರಿ ಕಡೆಗೆ ಹೋಗುತ್ತಿದ್ದ. ನಶೆಯಲ್ಲಿದ್ದ ಈತ ಕಂಟ್ರೋಲ್‌ಗೆ ಸಿಗದಂತೆ ಕಾರು ಚಲಾಯಿಸಿದ್ದಾನೆ. ಪರಿಣಾಮ ಕಾರು ಮರಕ್ಕೆ ಗುದ್ದಿದ ರಭಸಕ್ಕೆ ಎರಡು ಭಾಗವಾಗಿ ಬಿದ್ದಿತ್ತು. ಕಾರಿನ ಇಂಜಿನ್ ಭಾಗ ಒಂದು ಕಡೆ ಹಿಂಭಾಗ ಇನ್ನೊಂದು ಕಡೆ ಬಿದ್ದಿತ್ತು. ಕಾರನ್ನು ನೋಡಿದವರು ಒಳಗೆ ಇರುವವರು ಸ್ಪಾಟ್ ಡೆತ್ ಎಂದು ಕೊಂಡಿದ್ದರು. ಆದರೆ ನಶೆಯಲ್ಲಿದ್ದ ಯಶಸ್ಸನ್ನು ಕೂಡಲೇ ಸ್ಥಳೀಯರು ಹೊರಗೆ ಎಳೆದು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸರು ಕಾರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಾರಂತ್ಯ ಆಗಿದ್ದರಿಂದ ವಾಹನ ಸಂಚಾರ ಕೂಡ ಕಡಿಮೆಯಿತ್ತು. ಒಂದೊಮ್ಮೆ ಬೇರೆ ಯಾವುದಾದರೂ ವಾಹನ ಬಂದಿದ್ದರೆ ದುರಂತವೊಂದು ಸಂಭವಿಸುತ್ತಿತ್ತು. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಯಶಸ್‌ನ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳಿಸಿದ್ದಾರೆ. ಪರೀಕ್ಷ ವರದಿ ಬಂದ ನಂತರ ಮದ್ಯಪಾನ ಅಥವಾ ಡ್ರಗ್ಸ್ ಸೇವಿಸಿದ್ದನಾ ಎಂಬುದು ತಿಳಿಯಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ