ಚಿಕ್ಕಮಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ನೈರುತ್ಯ ಮುಂಗಾರು ಭರ್ಜರಿಯಾಗಿ ಸುರಿಯುತ್ತಿದೆ. ಅದರಲ್ಲೂ ಮಲೆನಾಡು ಪ್ರದೇಶದಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಈ ಕಾರಣದಿಂದ ಬಿಸಿಲು ಈ ಭಾಗದಲ್ಲಿ ಮರೀಚಿಕೆಯಾಗಿದ್ದು, ಥಂಡಿ ಥಂಡಿ ವಾತಾವರಣ ಎದುರಾಗಿದೆ. ಅಲ್ಲದೆ, ದಟ್ಟ ಮಂಜು ಆವರಿಸಿಕೊಂಡಿದೆ. ಈ ಕಾರಣದಿಂದಲೇ ಚಾರ್ಮಾಡಿ ಘಾಟಿಯಲ್ಲಿ ಸರ್ಕಾರಿ ಬಸ್ಸುಗಳ ಮುಖಾಮುಖಿ ಡಿಕ್ಕಿಯಾಗಿ (Road Accident) ಅವಘಡ ಸಂಭವಿಸಿದೆ. ಇದರಿಂದ ಎರಡೂ ಬಸ್‌ಗಳ ಡ್ರೈವರ್‌ಗಳಿಗೆ ತೀವ್ರ ಗಾಯಗಳಾಗಿವೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಇಬ್ಬರು ಡ್ರೈವರ್‌ಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಅವರು ಯಾರಿಗೂ ಯಾವುದೇ ಅಪಾಯ ಆಗಿಲ್ಲ.
ಇದನ್ನೂ ಓದಿ: Karnataka budget 2023 : ಗೃಹಲಕ್ಷ್ಮಿ ಜತೆಗೆ ಸಮಾನತೆ, ಸ್ವಾವಲಂಬನೆ, ಸಬಲೀಕರಣ ಮಂತ್ರ!
ಇನ್ನು ಅಪಘಾತಕ್ಕೆ ರಸ್ತೆ ಕಾಮಾಗಾರಿಯೇ ಕಾರಣ ಎಂದು ಹೇಳಲಾಗಿದೆ. ಚಾರ್ಮಾಡಿಯಲ್ಲಿ ರಸ್ತೆ ಕಾಮಗಾರಿಯನ್ನು ಕೂಡಲೇ ಮುಗಿಸುವಂತೆ ಸ್ಥಳೀಯರು ಸೇರಿದಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ. 2019ರಲ್ಲಿ ರಸ್ತೆ ಕುಸಿದಿದ್ದ ಕಾಮಗಾರಿ ಇನ್ನೂ ಮುಗಿದಿಲ್ಲ. ಇದು ಸಹ ಸಂಚಾರಕ್ಕೆ ಬಹಳವೇ ತೊಂದರೆ ಕೊಡುತ್ತಿದೆ.
ಕೆಲವೇ ಅಡಿ ದೂರ ನಿಂತರೂ ಕಾಣಲ್ಲ!
ಅಲ್ಲದೆ, ಚಾರ್ಮಾಡಿ ಘಾಟಿಯ ತುಂಬ ಮಂಜು ಆವರಿಸಿದೆ. ಈ ಕಾರಣಕ್ಕಾಗಿ ಚಾರ್ಮಾಡಿಯಲ್ಲಿ ವಾಹನಗಳಿಗೆ ಏನೂ ಕಾಣದ ಪರಿಸ್ಥಿತಿ ಇದೆ. ಕೆಲವೇ ಕೆಲವು ಅಡಿ ದೂರದಲ್ಲಿ ಇರುವವರು ಸಹ ಕಾಣದಂತಹ ಪರಿಸ್ಥಿತಿ ಎದುರಾಗಿದೆ.
ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್
ಅಪಘಾತವಾಗಿದ್ದರಿಂದ ಎರಡೂ ಕಡೆಯಿಂದಲೂ ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು. ಎರಡೂ ಬಸ್‌ಗಳು ಅಡ್ಡಲಾಗಿದ್ದರಿಂದ ಸಂಚಾರಕ್ಕೆ ಯಾವುದೇ ದಾರಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕೊನೆಗೆ ಪ್ರಯಾಣಿಕರೆಲ್ಲರೂ ಸೇರಿ ಬಸ್ ಅನ್ನು ಪಕ್ಕಕ್ಕೆ ಸರಿಸಲು ಸಹಾಯ ಮಾಡಿದ್ದಾರೆ.
ಇನ್ನು ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರು 10 ಕಿ.ಮೀ. ನಡೆದು ಕೊಟ್ಟಿಗೆಹಾರವನ್ನು ತಲುಪಿದ್ದಾರೆ. ಬಳಿಕ ಅಲ್ಲಿಂದ ಬೇರೆ ವಾಹನ ವ್ಯವಸ್ಥೆಯನ್ನು ಮಾಡಿಕೊಂಡು ತಮ್ಮ ಗಮ್ಯವನ್ನು ತಲುಪಲು ಮುಂದಾಗಿದ್ದಾರೆ.
ಇದನ್ನೂ ಓದಿ: Rain News : ಮಳೆ ಅನಾಹುತಕ್ಕೆ ಹಾಸನದಲ್ಲಿ ಮಹಿಳೆ ಬಲಿ
ಬೈಕ್‌ನಿಂದ ಆಯತಪ್ಪಿ ಬಿದ್ದು ಶಿಕ್ಷಕ ಸ್ಥಳದಲ್ಲೇ ಸಾವು
ಮಂಡ್ಯ: ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಶಿಕ್ಷಕರೊಬ್ಬರು ಬೈಕ್‌ನಿಂದ ನಿಯಂತ್ರಣ ತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರವಿ (45) ಮೃತ ಶಿಕ್ಷಕ ಎಂದು ಗುರುತಿಸಲಾಗಿದೆ. ಹಲ್ಲೇಗೆರೆ ಗ್ರಾಮದ ಪರಿಣಿತ ವಿದ್ಯಾಸಂಸ್ಥೆಯಲ್ಲಿ ಇವರು ಶಿಕ್ಷಕರಾಗಿದ್ದರು ಮಂಡ್ಯದಿಂದ ಹಲ್ಲೇಗೆರೆ ಗ್ರಾಮಕ್ಕೆ ಹೋಗುವಾಗ ಅವಘಡ ಸಂಭವಿಸಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.