Site icon Vistara News

Road Accident : ಡ್ರೈವರ್‌ಗೆ ತಲೆಸುತ್ತು! ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ

car accident in ramanagar

ರಾಮನಗರ: ಇಲ್ಲಿನ ಮಾಯಾಗನಹಳ್ಳಿ ಬಳಿ ಕಾರು ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ತಲೆ ಸುತ್ತಾಗಿದೆ. ಕಾರು ನಿಯಂತ್ರಣಕ್ಕೆ ಸಿಗದೆ ಡಿವೈಡರ್‌ಗೆ ಡಿಕ್ಕಿಯಾಗಿ (Road Accident) ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚನ್ನಪಟ್ಟಣದಿಂದ ಬೆಂಗಳೂರಿಗೆ ನಾಲ್ವರು ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಕಾರಲ್ಲಿ ಸಿಲುಕಿದವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಪಘಾತದಲ್ಲಿ ನಾಲ್ವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಅಪಘಾತದಿಂದ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಯಿತು

ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯೆ ರಸ್ತೆಯಲ್ಲಿ ಕಾರು ಪಲ್ಟಿಯಾದ ಕಾರಣದಿಂದಾಗಿ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಗದಗದಲ್ಲಿ ಚಲಿಸುತ್ತಿರುವಾಗಲೇ ಕಳಚಿದ ಸಾರಿಗೆ ಬಸ್‌ ಚಕ್ರ

ಗದಗ: ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್‌ನ (Gadag Bus) ಚಕ್ರ ಕಳಚಿಕೊಂಡು ಬಿದ್ದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿ ಬಸ್‌ನಲ್ಲಿದ್ದ 50ಕ್ಕೂ ಅಧಿಕ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಗದಗದಿಂದ ನರಗುಂದದ ಕಡೆ ಹೊರಟಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಮಗದ ಬಸ್‌ನ ಹಿಂದಿನ ಚಕ್ರ ಕಳಚಿ ಬಿದ್ದಿದೆ. ಗದಗ ಡಿಪೋಗೆ ಸೇರಿದ ಬಸ್‌ನ ಚಕ್ರ ಕಳಚಿದ್ದು, ಅದೃಷ್ಟವಶಾತ್‌ ಯಾರಿಗೂ ಪ್ರಾಣಹಾನಿ, ಗಾಯ ಆಗಿಲ್ಲ. ಬಸ್‌ ಚಲಿಸುವಾಗಲೇ ಹಿಂದಿನ ಚಕ್ರ ಕಳಚಿ ಬಿದ್ದಿದ್ದು, ಬಸ್‌ ಚಾಲಕನು ಕೂಡಲೇ ಬಸ್‌ ನಿಲ್ಲಿಸಿದ ಕಾರಣ ಅಪಘಾತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಕಾಲೇಜು ವಿದ್ಯಾರ್ಥಿಗಳು ಸೇರಿ 50ಕ್ಕೂ ಅಧಿಕ ಜನ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಚಾಲಕನು ಏಕಾಏಕಿ ಬ್ರೇಕ್‌ ಹಾಕಿದ ಕಾರಣ ಜನ ಗಲಿಬಿಲಿಗೊಂಡರು. ಕೂಡಲೇ ಕೆಳಗಿಳಿದು ನೋಡಿದಾಗ ಬಸ್‌ ಚಕ್ರ ಬಿದ್ದಿದ್ದನ್ನು ಕಂಡು ಮತ್ತಷ್ಟು ಗಾಬರಿಗೊಂಡರು. ಅಬ್ಬಾ ಯಾವುದೇ ಅಪಾಯ ಎದುರಾಗಲಿಲ್ಲ ಎಂದು ನಿಟ್ಟುಸಿರುಬಿಟ್ಟರು. ‌

ಶಕ್ತಿ ಯೋಜನೆಯನ್ನು ದೂರಿದ ಜನ

ಹೆಣ್ಣುಮಕ್ಕಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಬಸ್‌ಗಳು ಇಂತಹ ದುಸ್ಥಿತಿ ತಲುಪಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳು ಹಾಳಾಗುತ್ತಿವೆ. ಬಸ್‌ಗಳ ಸರಿಯಾದ ನಿರ್ವಹಣೆಯೂ ಇಂತಹ ಪರಿಸ್ಥಿತಿ ಎದುರಾಗಲು ಕಾರಣವಾಗಿದೆ. ಮಾರ್ಗ ಮಧ್ಯದಲ್ಲೇ ಹೆಚ್ಚಿನ ಬಸ್‌ಗಳು ಕೆಟ್ಟುನಿಲ್ಲುತ್ತಿವೆ ಎಂದು ದೂರಿದ್ದಾರೆ.

ಚಿತ್ರದುರ್ಗದಲ್ಲಿ ಡಿಆರ್‌ಡಿಒ ತಪಸ್‌ ವಿಮಾನ ಪತನ; ನೋಡಲು ಮುಗಿಬಿದ್ದ ಜನ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ಬೆಳಗ್ಗೆ (ಆಗಸ್ಟ್‌ 20) ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾನವರಹಿತ ಲಘುವಿಮಾನ (Chitradurga Plane Crash) ಪತನಗೊಂಡಿದೆ. ಪ್ರಾಯೋಗಿಕ ಹಾರಾಟದ ವೇಳೆ ತಪಸ್‌ 07A-14 ವಿಮಾನವು ಜಮೀನಿನಲ್ಲಿ ಪತನಗೊಂಡಿದೆ. ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಲಘು ವಿಮಾನ ಪತನಗೊಂಡಿದ್ದು, ಅದನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ನಾಯಕನಹಟ್ಟಿ ಬಳಿಯ ಡಿಆರ್‌ಡಿಒ ಘಟಕದಲ್ಲಿ ತಪಸ್‌ ಲಘು ವಿಮಾನವನ್ನು ತಯಾರಿಸಲಾಗಿದೆ. ಪ್ರಾಯೋಗಿಕವಾಗಿ ವಿಮಾನದ ಹಾರಾಟ ನಡೆಸುವ ವೇಳೆ ಅದು ಪತನಗೊಂಡಿದೆ. ವಿಮಾನ ಪತನವಾಗಲು ಇದುವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರೆಕ್ಕೆ ಕಳಚಿಕೊಂಡು ವಿಮಾನ ಪತನವಾದ ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ನೋಡಲು ಆಗಮಿಸುತ್ತಿದ್ದಾರೆ.

ಜಮೀನಿನಲ್ಲಿ ಪತನಗೊಂಡಿರುವ ವಿಮಾನ

ವಿಮಾನ ಪತನವಾದ ಸ್ಥಳಕ್ಕೆ ಡಿಆರ್‌ಡಿಒ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಮಾನ ಪತನವಾಗುತ್ತಲೇ ಬೆಂಕಿ ಹೊತ್ತಿಕೊಳ್ಳದ ಕಾರಣ ಯಾವುದೇ ಅಪಾಯ ಎದುರಾಗಿಲ್ಲ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಎರಡನೇ ವಿಮಾನ ಪತನ

ಚಿತ್ರದುರ್ಗ ಜಿಲ್ಲೆಯಲ್ಲಿ ಡಿಆರ್‌ಡಿಒದ ವಿಮಾನ ಪತನವಾಗುತ್ತಿರುವುದು ಎರಡನೇ ಬಾರಿ ಆಗಿದೆ. 2019ರ ಸೆಪ್ಟೆಂಬರ್‌ನಲ್ಲಿ ಡಿಆರ್‌ಡಿಒದ ರುಸ್ತುಂ 2 ಎಂಬ ಮಾನವರಹಿತ ಲಘು ವಿಮಾನ ಪತನವಾಗಿತ್ತು. ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿಯಲ್ಲಿ ಪತನಗೊಂಡಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version