Site icon Vistara News

Road Accident | ಹಲವರ ಬಾಳಲ್ಲಿ ಕತ್ತಲೆ ತಂದ ಹೊಸ ವರ್ಷದ ಮೊದಲ ದಿನ; ವಿವಿಧೆಡೆ ಅಪಘಾತಗಳಿಗೆ 10 ಮಂದಿ ಸಾವು

accident case in state

ಬೆಂಗಳೂರು: ಕೊರೊನಾ ಸಹಿತ ಕಹಿ ಘಟನೆಗಳನ್ನು ಮರೆತು ೨೦೨೩ರ ನೂತನ ವರ್ಷಕ್ಕೆ ಕಾಲಿಡಲಾಗಿದೆ. ಆದರೆ, ಹೊಸ ವರ್ಷದ ಮೊದಲ ದಿನವೇ ಹಲವರ ಬಾಳಲ್ಲಿ ಕತ್ತಲೆ ಕವಿಯುವಂತೆ ಮಾಡಿದೆ. ರಾಜ್ಯದ ಹಲವು ಕಡೆ ಭಾನುವಾರ (ಜ.೧) ಅಪಘಾತಗಳು ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಈ ಮೂಲಕ ಹಲವರ ಬಾಳಲ್ಲಿ ಕರಾಳ ಭಾನುವಾರವಾಗಿ (Road Accident) ಈ ದಿನ ಪರಿಣಮಿಸಿದೆ.

Black Sunday Road Accident

ಅಂಕೋಲಾದಲ್ಲಿ ನಾಲ್ವರ ಸಾವು, ಒಬ್ಬ ಗಂಭೀರ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಾಳೆಗುಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ (ಜ.೧) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ತಮಿಳುನಾಡು ಮೂಲದ ನಾಲ್ವರು ಪ್ರವಾಸಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಗಂಭೀರಗೊಂಡಿರುವ ಪ್ರಯಾಣಿಕನನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಅತಿ ವೇಗದಿಂದ ಬರುತ್ತಿದ್ದುದೇ ಅಪಘಾತ ಕಾರಣ ಎಂದು ಶಂಕಿಸಲಾಗಿದೆ. ಕಾರಿನ ನಿಯಂತ್ರಣ ತಪ್ಪಿದ್ದು, ಬಸ್‌ನ ಎಡಬದಿಗೆ ಗುದ್ದಿದೆ.

ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಬಸ್ ಸಂಚರಿಸುತ್ತಿದ್ದರೆ, ಅಂಕೋಲಾ ಕಡೆಯಿಂದ ಯಲ್ಲಾಪುರದತ್ತ ಕಾರು ಹೊರಟಿತ್ತು. ಕಾರಿನಲ್ಲಿ ಒಟ್ಟು ಐವರು ಪ್ರಯಾಣ ಮಾಡುತ್ತಿದ್ದರು. ಆದರೆ, ಅಪಘಾತದಿಂದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಾಯಗೊಂಡ ಇನ್ನೊಬ್ಬರಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Black Sunday Road Accident

ಖಾಸಗಿ ಬಸ್‌-ಇನ್ನೋವಾ ನಡುವೆ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಾರ್ಡಾಡಿ ಗ್ರಾಮದ ಮೋಗೆರಡ್ಕದಲ್ಲಿ ಇನ್ನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಅಪಘಾತ (Road Accident) ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಬಿದಿರೆಯ ಗಂಜಿಮಠ ಸುರಲ್ಪಾಡಿ ನಿವಾಸಿ ನೌಷದ್ ಹಾಜಿ (47) ಮತ್ತು ಚಾಲಕ ಉಲಾಯಿಬೆಟ್ಟು ನಿವಾಸಿ ಫಾಜಿಲ್ (21) ಮೃತರು. ಮೂಡಬಿದಿರೆಯಿಂದ ಬೆಳ್ತಂಗಡಿ ಕಡೆಗೆ ಇನ್ನೋವಾ ಕಾರು ಬರುತ್ತಿತ್ತು. ಬೆಳ್ತಂಗಡಿಯಿಂದ ಮೂಡಬಿದಿರೆ ಕಡೆಗೆ ಬಸ್ ಹೋಗುತ್ತಿತ್ತು. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ | Job Fraud | ದೇಶದ ಅತಿದೊಡ್ಡ ಉದ್ಯೋಗ ವಂಚನೆ ಹಗರಣ ಬಯಲಿಗೆಳೆದ ಪೊಲೀಸ್​; ಮಾಸ್ಟರ್​ಮೈಂಡ್​ ಜಾಫರ್ ಅಹ್ಮದ್​​ ಅರೆಸ್ಟ್​

ನಿಂತಿದ್ದ ಟಿಪ್ಪರ್‌ ಲಾರಿಗೆ ಬೈಕ್‌ ಡಿಕ್ಕಿ; ಬೈಕ್‌ ಸವಾರ ಸಾವು, ಇನ್ನೊಬ್ಬ ಗಂಭೀರ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂದಿನಿಂದ ಬೈಕ್‌ ಡಿಕ್ಕಿ ಹೊಡೆದು (Road Accident) ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊಬ್ಬ ಸವಾರನ ಸ್ಥಿತಿ ಗಂಭೀರವಾಗಿದೆ. ದ್ವಿಚಕ್ರ ವಾಹನದಲ್ಲಿ ಸವಾರರಿಬ್ಬರು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಪಶ್ಚಿಮ‌ ಬಂಗಾಳದ ಬೈಬಾದ್ ಷಾ (25) ಮೃತ ಯುವಕ. ಹಿಂಬದಿ ಸವಾರ ವಿಜಯ್ ಪಹರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಲಾರಿಯಡಿ ಬೈಕ್‌ ಸಿಲುಕಿತ್ತು. ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯರಿಂದ ಲಾರಿಯಿಂದ ಬೈಕ್‌ ಅನ್ನು ಎಳೆದು ಹಿಂಬದಿ ಸವಾರನನ್ನು ರಕ್ಷಣೆ ಮಾಡಿದ್ದಾರೆ. ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ; ಒಬ್ಬಳ ಸಾವು
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಛಣಿಕೆ ಗ್ರಾಮದಲ್ಲಿ ಬಸ್ ಇಲ್ಲದಿದ್ದಕ್ಕೆ ನಡೆದುಕೊಂಡು ಹೊರಟಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿಯಾಗಿದ್ದು, ಒಬ್ಬಳು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿತ್ತೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಅಕ್ಕವ್ವ ಹೂಲಿಕಟ್ಟಿ ಮೃತ ವಿದ್ಯಾರ್ಥಿನಿ. ಈ ಭಾಗದಲ್ಲಿ ಸಮರ್ಪಕವಾಗಿ ಬಸ್‌ ಸೇವೆ ಇರಲಿಲ್ಲ. ಹೀಗಾಗಿ ಶನಿವಾರ (ಡಿ.೩೧) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಭಾನುವಾರ (ಜ.೧) ಸಹ ಬಸ್ ವ್ಯವಸ್ಥೆ ಇಲ್ಲದೇ ಇದ್ದಿದ್ದಕ್ಕೆ ವಿದ್ಯಾರ್ಥಿನಿಯರು ಶಾಲೆಗೆ ನಡೆದೇ ಹೊರಟಿದ್ದರು. ಆಗ ಅವಘಡ ಸಂಭವಿಸಿದೆ. ಶಿವನೂರಲ್ಲಿ ವಿದ್ಯಾರ್ಥಿನಿ ಅಕ್ಕವ್ವ ಹೂಲಿಕಟ್ಟಿ ಮೃತದೇಹವನ್ನಿಟ್ಟು ಕುಟುಂಬದವರು ಮತ್ತು ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಮಾಜಿ ಶಾಸಕ ಡಿ.ಬಿ.ಇನಾಂದಾರ್ ಭೇಟಿ ನೀಡಿದ್ದು ಆಕ್ರೋಶಗೊಂಡಿದ್ದ ಗ್ರಾಮಸ್ಥರು, ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಮದ್ಯದ ನಶೆಯಲ್ಲಿ ಅಪಘಾತ; ಬೈಕ್‌ ಸವಾರ ಮೃತ್ಯು
ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿ ಬಳಿ ಮದ್ಯದ ನಶೆಯಲ್ಲಿ ಬೈಕ್‌ ಓಡಿಸುವಾಗ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಗಿರೀಶ್ (18) ಮೃತ ದುರ್ದೈವಿ. ಗಿರೀಶ್‌ ತನ್ನ ಸ್ನೇಹಿತರೊಂದಿಗೆ ಹೊಸ ವರ್ಷದ ಪಾರ್ಟಿಗೆ ತೆರಳಿದ್ದ. ಪಾರ್ಟಿ ಮುಗಿಸಿ ವಾಪಸ್‌ ಬರುವಾಗ ಬೈಕ್‌ನಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಬಸ್ಸಿಗೆ ಡಿಕ್ಕಿ, ಯುವಕ ಸ್ಥಳದಲ್ಲೇ ಮೃತ್ಯು
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾರ್ಲೆ ಕೂಡಿಗೆ ಗ್ರಾಮದ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಗೆ ಸಮೀಪದ ಕಾಕನಮನೆ ಗ್ರಾಮದ ಯುವಕ ಅಭಿ ಎಂಬುವವರೇ ಮೃತಪಟ್ಟ ಯುವ ಚಾಲಕ. ಅಭಿ ಹೊಸ ವರ್ಷದ ಪಾರ್ಟಿ (New year tragedy) ಮುಗಿಸಿ ಹಾನುಬಾಳು ಕಡೆಯಿಂದ ಕಾರಿನಲ್ಲಿ ವಾಪಸ್‌ ಬರುತ್ತಿದ್ದರೆ, ಬಸ್‌ ಸಕಲೇಶಪುರದಿಂದ ಹಾನುಬಾಳು ಕಡೆಗೆ ಹೋಗುತ್ತಿತ್ತು. ಬಸ್‌ ಸಂಪೂರ್ಣವಾಗಿ ಎಡಭಾಗದಲ್ಲಿದ್ದು, ಇನ್ನಷ್ಟು ಎಡಕ್ಕೆ ಜರುಗಿದೆ. ಕಾರು ಸಂಪೂರ್ಣ ಬಲಭಾಗಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಇದು ನಿದ್ದೆಯಿಂದ ಉಂಟಾಗಿರುವ ಅವಾಂತರವೇ? ಮದ್ಯದ ಅಮಲಿನ ಪರಿಣಾಮವೇ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ನಡೆಯುತ್ತಿದೆ.

ಬಸ್‌- ಕಾರು ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದವರಿಗೆ ಗಂಭೀರ ಗಾಯ
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕುಮಟಾ ರಸ್ತೆ ಕೊಳಗಿಬಿಸ್ ಸಮೀಪ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಶಿರಸಿಯಿಂದ ಕುಮಟಾ ಕಡೆಗೆ ಹೊರಟಿದ್ದ ಬಸ್ ಹಾಗೂ ಕುಮಟಾ ಮಾರ್ಗವಾಗಿ ಶಿರಸಿ ಕಡೆಗೆ‌ ಬರುತ್ತಿದ್ದ ಕಾರಿನ ನಡುವೆ ಅಪಘಾತವಾಗಿದೆ. ಕಾರಿನಲ್ಲಿದ್ದ ೪ ಪ್ರಯಾಣಿಕರಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ಹೆಬ್ರಿ ಕರಿಯಾಲು ಕ್ರಾಸ್‌ ಬಳಿ ಕಾರು ಪಲ್ಟಿ; ಇಬ್ಬರು ಗಂಭೀರ
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ವ್ಯಾಪ್ತಿಯ ಹೆಬ್ರಿ ಅಂಡಾರು ಕರಿಯಾಲು ಕ್ರಾಸ್‌ ಬಳಿ ಕಾರೊಂದು ಪಲ್ಟಿಯಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕಾರ್ಕಳ ಅಜೆಕಾರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಕಾರು ಇದಾಗಿದೆ. ಬೆಂಗಳೂರಿನಿಂದ ಕೆರುವಾಶೆಯ ಮೂಲಕ ಅಜೆಕಾರಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯ
ತಮಿಳುನಾಡು ಸರ್ಕಾರಿ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಡಿಕ್ಕಿಯಾಗಿರುವ ಘಟನೆ ಡೆಂಕಣಿಕೋಟೆ ಸಮೀಪದ ಅಂಚೆಟ್ಟಿ ಬಳಿ ನಡೆದಿದೆ. ಅಂಚೆಟ್ಟಿಯ ಮುತ್ತರಾಯನಸ್ಬಾಮಿ ದೇವಾಯದ ತಿರುವಿನಲ್ಲಿ ಅಪಘಾತ ನಡೆದಿದ್ದು, ಪಿಕ್ಅಪ್ ವಾಹನದ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಪಿಕ್ಅಪ್ ವಾಹನ ಸಂಪೂರ್ಣ ಜಖಂ ಆಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Siddaramaiah | ಕುರಿ ಮರಿ, ಹೊಲ ಮಾರಿ ಸಿದ್ದುಗೆ ಹೆಲಿಕಾಪ್ಟರ್ ಕೊಡಿಸ್ತೇವೆ ಎಂದ ಬಾದಾಮಿ ಜನ

Exit mobile version