Site icon Vistara News

Road Accident : ಅಜ್ಜನ ಸಾವಿನ ಸುದ್ದಿ ಕೇಳಿ ಅವಸರದಲ್ಲಿ ಹೊರಟಿದ್ದ ಮೊಮ್ಮಗ ಸಾವು!

Road Accident in Chamarajanagar

ಚಾಮರಾಜನಗರ/ಉಡುಪಿ: ಅಜ್ಜನ ಸಾವಿನ ಸುದ್ದಿ ಕೇಳಿ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ಮೆಡಿಕಲ್‌ ವಿದ್ಯಾರ್ಥಿ ಅಪಘಾತದಲ್ಲಿ (Road Accident) ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

ಉಡುಪಿ ಜಿಲ್ಲೆ ಹೆಬ್ರಿ ಮೂಲದ ನಿತೀಶ್ ಪೂಜಾರಿ ಮೃತ ದುರ್ದೈವಿ ಆಗಿದ್ದಾನೆ. ಚಾಮರಾಜನಗರದಲ್ಲಿ ನಿತೀಶ್‌ ಪೂಜಾರಿ ಮೆಡಿಕಲ್‌ ವಿದ್ಯಾಭ್ಯಾಸ ಮಾಡುತ್ತಿದ್ದ. ನಿನ್ನೆ ಭಾನುವಾರ ವಯೋಸಹಜ ಕಾಯಿಲೆಯಿದ್ದ ಅಜ್ಜ ಮೃತಪಟ್ಟಿದ್ದಾಗಿ ಕುಟುಂಬಸ್ಥರು ವಿಷಯ ಮುಟ್ಟಿಸಿದ್ದರು.

ಹೀಗಾಗಿ ಬಾರದ ನೋವಿನಲ್ಲೇ ಬಸ್‌ ಬದಲಿಗೆ ಭಾನುವಾರ ತಡರಾತ್ರಿ ಬೈಕ್‌ ಮೂಲಕ ಊರಿಗೆ ಹೊರಟಿದ್ದ. ಆದರೆ ಅವಸರದಲ್ಲಿದ್ದ ಆತನಿಗೆ ರಸ್ತೆಯಲ್ಲಿದ್ದ ಹಂಪ್ಸ್ ಕಾಣದೆ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಬೈಕ್‌ ವೇಗವಾಗಿ ಇದ್ದ ಕಾರಣಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಾಮರಾಜನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿದ್ದು, ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮನೆಯ ಹಿರಿಯ ಸದಸ್ಯನನ್ನು ಕಳೆದುಕೊಂಡ ದುಃಖದಲ್ಲಿದ್ದ ಆ ಕುಟುಂಬಕ್ಕೆ, ಇದೀಗ ಮನೆ ಮಗನು ಇನ್ನಿಲ್ಲ ಎಂಬ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್;‌ ಬಡ್ಡಿ ದಂಧೆ ಕರಾಳತೆ ಬಯಲು

ಅಪಘಾತ ಬಳಿಕ ವ್ಯಕ್ತಿಯ ಜೀವ ಉಳಿಸಿದ ಮೊಹಮ್ಮದ್‌ ಶಮಿ; ಎಷ್ಟು ಸಲ ಹೃದಯ ಗೆಲ್ತೀರಿ ಎಂದ ಜನ

ಡೆಹ್ರಾಡೂನ್:‌ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮೊಹಮ್ಮದ್‌ ಶಮಿ ಅವರು ದೇಶದ ಶತಕೋಟಿ ಜನರ ಮನಗೆದ್ದಿದ್ದಾರೆ. ಅವರ ಮೊನಚಾದ ಬೌಲಿಂಗ್‌, ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಅದ್ಭುತ ಪ್ರದರ್ಶನದ ಕುರಿತು ಈಗಲೂ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ಅಪಘಾತದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಉಳಿಸುವ ಮೂಲಕ ಮೊಹಮ್ಮದ್‌ ಶಮಿ ಅವರು ಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಮೊಹಮ್ಮದ್‌ ಶಮಿ ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ಒಂದು ಜೀವ ಉಳಿಸಿದ ಖುಷಿ ನನ್ನದಾಯಿತು. ಈ ವ್ಯಕ್ತಿ ತುಂಬ ಅದೃಷ್ಟವಂತ. ಉತ್ತರಾಖಂಡದ ನೈನಿತಾಲ್‌ ಬಳಿ ಈಗಷ್ಟೇ ಕಾರೊಂದು ಬೆಟ್ಟದಿಂದ ಕೆಳಗೆ ಬಿತ್ತು. ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಇದರಿಂದ ಕಾರಿನಲ್ಲಿದ್ದ ವ್ಯಕ್ತಿಗೆ ಮರು ಜನ್ಮ ಸಿಕ್ಕಂತಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಮೊಹಮ್ಮದ್‌ ಶಮಿ ಅವರು ಮೈದಾನದಲ್ಲಿ ಭಾರತ ತಂಡವನ್ನು ರಕ್ಷಿಸುತ್ತಾರೆ. ಹಾಗೆಯೇ, ಮೈದಾನದ ಹೊರಗೆ ದೇಶದ ಜನರನ್ನು ರಕ್ಷಿಸುತ್ತಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಮೊಹಮ್ಮದ್‌ ಶಮಿ ಅವರೇ, ಇರೋ ಒಂದು ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಮೈದಾನದ ಹೊರಗಾಗಲಿ, ಮೈದಾನದ ಒಳಗಾಗಲಿ, ಮೊಹಮ್ಮದ್‌ ಶಮಿ ಹೀರೊ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ನೂರಾರು ಜನ ಮೊಹಮ್ಮದ್‌ ಶಮಿ ಅವರ ಮಾನವೀಯ ಗುಣವನ್ನು ಕೊಂಡಾಡಿದ್ದಾರೆ.

ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ

ಕೆಲ ದಿನಗಳ ಹಿಂದಷ್ಟೇ ಮುಕ್ತಾಯಗೊಂಡ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಅವರು 24 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್‌ ತೆಗೆದುಕೊಂಡ ಬೌಲರ್‌ ಎನಿಸಿದರು. ಅದರಲ್ಲೂ, ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ತಂಡ ಗೆಲುವು ಸಾಧಿಸುವಲ್ಲಿ ಶಮಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಸೋತು ನಿರಾಸೆ ಅನುಭವಿಸಿದ ಬಳಿಕ ಮೊಹಮ್ಮದ್‌ ಶಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂತೈಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version