Site icon Vistara News

Road accident: ಕಂಟೇನರ್‌ ಪಲ್ಟಿಯಾಗಿ ಚಾಲಕ, ಕ್ಲೀನರ್‌ ಸಾವು; ಹೆದ್ದಾರಿಯಲ್ಲಿ ಐಸ್‌ಕ್ರೀಂ ಚೆಲ್ಲಾಪಿಲ್ಲಿ

Containrer overturns

ಆನೇಕಲ್: ಐಸ್‌ ಕ್ರೀಂ ಕಂಟೇನರ್‌ (Ice cream Container) ಒಂದು ಹೆದ್ದಾರಿಯಲ್ಲಿ ಪಲ್ಟಿ ಹೊಡೆದು (Road accident) ಅದರ ಚಾಲಕ ಮತ್ತು ಕ್ಲೀನರ್‌ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬಾಕ್ಸ್‌ಗಳಲ್ಲಿ ತುಂಬಿದ್ದ ಐಸ್‌ ಕ್ರೀಂ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ವೃತ್ತದಲ್ಲಿ (Attibele Circle) ಘಟನೆ ನಡೆದಿದ್ದು, ವೃತ್ತದಲ್ಲಿ ತಿರುವು ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.

ಬೊಮ್ಮಸಂದ್ರದಿಂದ ಹೊಸಕೋಟೆಗೆ ಹೋಗುತ್ತಿದ್ದ ಐಸ್ ಕ್ರೀಮ್ ಕಂಟೇನರ್ ಇದಾಗಿದ್ದು, ವೇಗವಾಗಿ ಸಾಗುತ್ತಿದ್ದು ನಿಯಂತ್ರಣ ತಪ್ಪಿ ಅದು ಪಲ್ಟಿಯಾಗಿದೆ. ಮೃತ ಚಾಲಕ ಮತ್ತು ಕ್ಲೀನರ್‌ ತಮಿಳುನಾಡು ಮೂಲದವರೆಂದು ತಿಳಿದುಬಂದಿದೆ.

ವಾಹನ ಪಲ್ಟಿಯಾಗಿ ಐಸ್‌ ಕ್ರೀಂ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಪರಿಣಾಮವಾಗಿ ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಯಿತು. ಕೂಡಲೇ ಕಾರ್ಯಾಚರಣೆ ನಡೆಸಿದ ಅತ್ತಿಬೆಲೆಯ ಪೊಲೀಸರು ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಕ್ರೇನ್‌ಗಳನ್ನು ಕರೆಸಿಕೊಂಡು ವಾಹನವನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಐಸ್‌ ಕ್ರೀಂ ಬಾಕ್ಸ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಚಾಲಕ ಮತ್ತು ಕ್ಲೀನರ್‌ ಮೃತ ದೇಹಗಳನ್ನು ಆಕ್ಸ್‌ಫರ್ಡ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಿಲ್ಕಿ ಮಿಸ್ಟ್‌ ಕಂಪನಿಗೆ ಸೇರಿದ ಕಂಟೇನರ್‌ ಇದಾಗಿದ್ದು, ತಮಿಳುನಾಡು ಮೂಲದ ಚಾಲಕ ಕಾರ್ತಿಕ್‌, ಕ್ಲೀನರ್ ಉದಯ್ ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿಗಳು.

ಚಾಲಕನ ಅತಿವೇಗದಿಂದ ನಡೆದ ಅಪಘಾತ ಇದೆಂದು ಹೇಳಲಾಗಿದ್ದು, ವಾಹನ ಮೊದಲು ಹೆದ್ದಾರಿಯ ಬ್ಯಾರಿಕೇಡ್‌ಗೆ ಗುದ್ದಿ, ಬಳಿಕ ಕಂಟೇನರ್‌ ಪಲ್ಟಿಯಾಗಿದೆ. ಈ ವೇಳೆ ಬ್ಯಾರಿಕೇಡ್‌ನ ಕಂಬಿಗಳು ಚುಚ್ಚಿ ಡ್ರೈವರ್ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತ ನಡೆದ ಸ್ಥಳಕ್ಕೆ ಬೆಂ.ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದಾರೆ.

ಟಿಪ್ಪರ್‌ ಚಾಲಕನ ಅಜಾಗರೂಕತೆಗೆ ಇಬ್ಬರು ಯುವಕರ ಸಾವು

ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಡೆದ ಅಪಘಾತದ ದೃಶ್ಯ

ಬೆಂಗಳೂರಿನಲ್ಲಿ ನಡೆದ ಒಂದು ಅಪಘಾತ ಇಬ್ಬರು ಯುವಕರನ್ನು ಬಲಿ ಪಡೆದಿದೆ. ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆಯಿಂದ ಇಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಪುಲಿಕೇಶಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯೂಸುಫ್ (19), ಫರಾಜ್ (19) ಮೃತ ದುರ್ಧೈವಿಗಳು.

ಯೂಸುಫ್ (19), ಫರಾಜ್ (19) ಅವರು ಖಾಸಗಿ ಹೋಟೆಲ್‌ ಒಂದರಲ್ಲಿ ಕಾರ್ಮಿಕರಾಗಿರುವ ಹೊರ ರಾಜ್ಯದ ಯುವಕರು. ಅವರು ರಾತ್ರಿ 2 ಗಂಟೆಯ ಹೊತ್ತಿಗೆ ಕೆಲಸ ಮುಗಿಸಿ ತಮ್ಮ ವಾಸದ ಮನೆಯತ್ತ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿ ಒನ್ ವೇಯಲ್ಲಿ ಬಂದ ಟಿಪ್ಪರ್ ಚಾಲಕ ನೇರವಾಗಿ ಬೈಕ್‌ ಮೇಲೆ ಬರುತ್ತಿದ್ದ ಯುವಕರ ಮೇಲೆ ನುಗ್ಗಿಸಿದ್ದಾನೆ. ಘಟನೆಯಲ್ಲಿ ಯುವಕರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುಲಿಕೇಶಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಸುನಿಲ್‌ ಎಂಬಾತನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Road Accident : ನಾಳೆ ಇಬ್ಬರು ಹೆಣ್ಣುಮಕ್ಕಳ ಮದುವೆ ಇತ್ತು; ಇವತ್ತು ಅಪಘಾತದಲ್ಲಿ ಅಪ್ಪನೇ ಇಲ್ಲವಾದರು!

Exit mobile version