ಚಿಕ್ಕಬಳ್ಳಾಪುರ: ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ಮಾರ್ಗದಲ್ಲಿ ಟಂಟಂ ಆಟೊವೊಂದು ಪಾದಚಾರಿಗಳ ಮೇಲೆ ಹರಿದಿದೆ. ಈ ರಸ್ತೆ ಅಪಘಾತದಲ್ಲಿ (Road Accident) ವಿದ್ಯಾರ್ಥಿಗಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ. ಚಾಲಕ ಕುಡಿದ ಅಮಲಿನಲ್ಲಿ ವಾಹನವನ್ನು ಚಲಾಯಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.
ವೇಗವಾಗಿ ಬಂದ ಟಂಟಂ ಆಟೊ ಪಾದಚಾರಿಗಳಿಗೆ ಗುದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸಾರ್ವಜನಿಕರು ರಕ್ಷಣೆಗೆ ದಾವಿಸಿದ್ದು, ಆಟೊ ಕೆಳಗೆ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿದ್ದಾರೆ.
ಸದ್ಯ ಏಳು ಮಂದಿ ಗಾಯಾಳುಗಳಿಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Free Bus Service: ಗದಗದಲ್ಲಿ ‘ಒರಿಜಿನಲ್’ ಕಿರಿಕ್; ಫ್ರೀ ಬಸ್‌ಗೆ ಮೊಬೈಲ್ ಡಾಕ್ಯುಮೆಂಟ್ ಎಲ್ಲ ಆಗೋಲ್ಲ!
ಗೊಲ್ಲರಹಟ್ಟಿ ಬಳಿ ಲಾರಿ ಹಾಗೂ ಕಾರಿನ ಮಧ್ಯೆ ಅಪಘಾತ; ಇಬ್ಬರು ಸಾವು
ಚಿತ್ರದುರ್ಗ: ತಾಲೂಕಿನ ವಿಜಯಪುರ ಗೊಲ್ಲರಹಟ್ಟಿ ಬಳಿ ಲಾರಿ ಹಾಗೂ ಕಾರಿನ ಮಧ್ಯೆ ಅಪಘಾತ (Road Accident) ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ದಾವಣಗೆರೆಯಿಂದ ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಮೃತರ ಗುರುತು ಇನ್ನೂ ಪತ್ತೆ ಆಗಿಲ್ಲ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಜಯಪುರ ಗೊಲ್ಲರಹಟ್ಟಿ ಬಳಿ ಸಂಭವಿಸಿರುವ ಅಪಘಾತ
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಟೋಲ್ ಬಳಿ ಚಲಿಸುತ್ತಿದ್ದ ಲಾರಿಗೆ ತೆಲಂಗಾಣ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಚಾಲಕ ಸೇರಿದಂತೆ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಬಸ್ ಚಾಲಕನಿಗೆ ಕಾಲು ಮುರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .
ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಟೋಲ್ ಫ್ಲಾಜಾ ಬಳಿ ಅಪಘಾತ ಸಂಭವಿಸಿದೆ. ತೆಲಂಗಾಣ ಸಾರಿಗೆ ಬಸ್ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿತ್ತು. ಬಾಗೇಪಲ್ಲಿ ಟೋಲ್ ಬಳಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಅಪಘಾತಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಳದಲ್ಲೇ ಸಾವು
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ಸಾರಿಗೆ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Free Bus Service: ದುಡ್ಡೂ ತಂದಿಲ್ಲ, ದಾಖಲೆಯೂ ಜತೆಗಿಲ್ಲ; ಬಸ್ಸಿನಲ್ಲೇ ಗೊಳೋ ಎಂದು ಅತ್ತ ಮಹಿಳೆ!
ನಿಲುವಾಗಿಲು ಗ್ರಾಪಂ ಸದಸ್ಯ ಭಾಸ್ಕರ್ ಮೃತ ದುರ್ದೈವಿ. ಕಾರಿನಲ್ಲಿದ್ದ ಪತ್ನಿ, ತಾಯಿ ಹಾಗೂ ಪುತ್ರನಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾಸ್ಕರ್ ಕಾರು ಚಾಲನೆ ಮಾಡುತ್ತಿದ್ದರು. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.