ಕಲಬುರಗಿ: ಅಫಜಲಪುರ- ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National highway) ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿ 5 ಮಂದಿ ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊರವಲಯದ ನೀರಾವರಿ ಕಚೇರಿ ಬಳಿ ದುರ್ಘಟನೆ ನಡೆದಿದೆ. ಲಾರಿ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಜೀಪಿನಲ್ಲಿದ್ದ ಐವರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಮೃತ ದುರ್ದೈವಿಗಳನ್ನು ಸಂತೋಷ್(40), ಶಂಕರ್(55), ಸಿದ್ದಮ್ಮ(50), ಹುಚ್ಚಪ್ಪ(5), ಪೂಜಾ(30) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಅಫಜಲಪುರ ಮಾಡ್ಯಾಳ ಗ್ರಾಮದ ನಿವಾಸಿಗಳು. ಅಫಜಲಪುರ ಕಡೆಯಿಂದ ಮಲ್ಲಾಬಾದ್ ಕಡೆ ಇವರ ಕಮಾಂಡೋ ಜೀಪ್ ಹೊರಟಿತ್ತು.
ಕಲಬುರಗಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿಗೆ ಜೀಪು ಡಿಕ್ಕಿಯಾಗಿದೆ. ಜೀಪಿನಲ್ಲಿದ್ದವರೆಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದ್ದಾರೆ.
ಲಾರಿ ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವು
ತುಮಕೂರು: ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ (Road Accident) ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರು ನಗರದ ಶಿರಾ ಗೇಟ್ ಬಳಿ ಎಸ್ ಮಾಲ್ ಬಳಿ ಘಟನೆ ನಡೆದಿದೆ. ತುಮಕೂರಿನ ಶಾಂತಿನಗರ ನಿವಾಸಿ ರಾಜಣ್ಣ (64) ಮೃತ ದುರ್ದೈವಿ.
ರಾಜಣ್ಣ ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೋಮವಾರ ಬೆಳಗ್ಗೆ ತರಕಾರಿ, ಹೂ-ಹಣ್ಣು ತರಲು ಅಂತರಸನಹಳ್ಳಿ ಮಾರುಕಟ್ಟೆಗೆ ತೆರಳಿದ್ದರು. ಮಾರ್ಕೆಟ್‌ನಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ನಿಂದ ಹಾರಿ ಬಿದ್ದ ರಾಜಣ್ಣರ ತಲೆಯೇ ನುಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇನ್ನು ಅಪಘಾತದಲ್ಲಿ ಸ್ಕೂಟರ್ ಪೂರ್ತಿ ಛಿದ್ರಗೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆ ತುಮಕೂರು ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಹಿಟ್ ಆ್ಯಂಡ್ ರನ್, ಬೈಕ್ ಡಿಕ್ಕಿ: ಇಬ್ಬರು ಸಾವು
ಬೆಂಗಳೂರು: ರಾಜಧಾನಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತ (Road Accident) ಪ್ರಕರಣಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಸಾವಿಗೀಡಾಗಿದ್ದಾರೆ. ರಿಂಗ್ ರೋಡ್ ನಮ್ಮೂರ ತಿಂಡಿ ಹೋಟೆಲ್ ಬಳಿ ರಾತ್ರಿ 12.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ರಾಜರಾಜೇಶ್ವರಿನಗರದ ಶ್ರೇಯಸ್ (23) ಸಾವನ್ನಪ್ಪಿದ ಬೈಕ್ ಸವಾರ. ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರೇಯಸ್, ರಾತ್ರಿ ವಿದ್ಯಾರಣ್ಯಪುರದಲ್ಲಿ ಸ್ನೇಹಿತನನ್ನು ಭೇಟಿ ಮಾಡಿ ಮನೆಗೆ ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಮೈಸೂರು ರಸ್ತೆ ಟೋಲ್ ಗೇಟ್ ಬಳಿ ಹಿಟ್ ಆ್ಯಂಡ್ ರನ್ ಸಂಭವಿಸಿದ್ದು, ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಮೃತ ಮಹಿಳೆಯ ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಸಿಸಿಟಿವಿಗಳ ಪರಿಶೀಲನೆ ಮಾಡಿ ಅಪಘಾತ ಮಾಡಿ ಎಸ್ಕೇಪ್ ಆಗಿರುವ ವಾಹನ ಪತ್ತೆಗೆ ಶೋಧ ನಡೆಸಲಾಗುತ್ತಿದೆ.
ಇದನ್ನೂ ಓದಿ: Road Accident: ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆಗೆ ಡಿಕ್ಕಿ ಹೊಡದ ಲಾರಿ; ಮನೆಯಲ್ಲಿದ್ದ ಮಹಿಳೆ ಸಾವು