ವಿಜಯಪುರ: ವಿಜಯಪುರ ನಗರದ ಐಒಸಿ ಪೆಟ್ರೋಲ್ ಪಂಪ್ ಬಳಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬೈಕ್ ಹಾಗೂ ಲಾರಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ 25 ವರ್ಷದ ವಿನೋದ ಮೃತಪಟ್ಟಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತದಲ್ಲಿ ಇಬ್ಬರು ಮೃತ್ಯು; ರಂಭಾಪುರಿ ಶ್ರೀಗಳಿದ್ದ ಕಾರಿಗೆ ಅಪಘಾತ
ವಿಜಯನಗರ/ಯಾದಗಿರಿ: ಯಾದಗಿರಿಯ ಸುರಪುರ ಪಟ್ಟಣದ ಕೌಡಿಮಟ್ಟಿ ಬಳಿ ಭಾನುವಾರ (ಏ.9) ಬೆಳಗ್ಗೆ ಖಾಸಗಿ ಬಸ್‌ವೊಂದು (Private Bus) ಪಲ್ಟಿ ಆಗಿದೆ. ಅಪಘಾತದಲ್ಲಿ (Road Accident) ಸ್ಥಳದಲ್ಲಿ ಒಬ್ಬ ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಬೀದರ್ ಕಡೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಆರೆಂಜ್ ಟ್ರಾವೆಲ್‌ಗೆ ಸೇರಿದ ಬಸ್ ಪಲ್ಟಿಯಾಗಿದೆ.
ಇದನ್ನೂ ಓದಿ: Modi in Karnataka: ಬಂಡೀಪುರ ಕಾಡಲ್ಲಿ 22 ಕೀ.ಮೀ. ದೂರ 2 ಗಂಟೆ ಸುತ್ತಿದರೂ ಮೋದಿಗೆ ಕಾಣದ ಹುಲಿ!
ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಬಸ್ ಅಡಿ ಸಿಲುಕಿದವರನ್ನು ಹೊರ ತೆಗೆಯಲು ಗ್ರಾಮಸ್ಥರು ನೆರವಾದರು. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಪಲ್ಟಿಯಾದ ಬಸ್ ಅನ್ನು ಮೇಲಕ್ಕೆ ಎತ್ತುವ ಕಾರ್ಯ ಮಾಡಲಾಯಿತು.
ಬೈಕ್ ಅಪಘಾತದಲ್ಲಿ ಸವಾರ ಮೃತ್ಯು
ವಿಜಯನಗರದ ಹೊಸಪೇಟೆ ತಾಲೂಕಿನ ಹಂಪಿ ಸಮೀಪದ ಕಡ್ಡಿರಾಂಪುರ ಬಳಿ ಬೈಕ್ ಅಪಘಾತವಾಗಿದ್ದು, ಸವಾರ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ನವೀನ್ (23) ಮೃತ ಬೈಕ್ ಸವಾರನಾಗಿದ್ದು, ಮತ್ತೊಬ್ಬ ಗಾಯಾಳು ಬೊಮ್ಮ ಎಂಬಾತನನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ನವೀನ್ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ನಿವಾಸಿ ಆಗಿದ್ದಾರೆ. ಹಂಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಂಭಾಪುರಿ ಶ್ರೀಗಳಿದ್ದ ಕಾರಿಗೆ ಅಪಘಾತ
ವಿಜಯನಗರದ ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಹರಿಹರದಿಂದ ಹರಪನಹಳ್ಳಿ ಮಾರ್ಗವಾಗಿ ಬರುತ್ತಿದ್ದಾಗ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಕಾರು ಅಪಘಾತಕ್ಕೀಡಾಗಿದೆ. ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ರಂಭಾಪುರಿ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹರಪನಹಳ್ಳಿ ತಾಲೂಕಿನ ಚಿರಸ್ತಹಳ್ಳಿಯ ತಿರುವಿನಲ್ಲಿ ಎದುರಿಗೆ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಶ್ರೀಗಳ ಕಾರಿಗೆ ಗುದ್ದಿದ ರಭಸಕ್ಕೆ ಎಂಜಿನ್ ಮೇಲೆ ಬೈಕ್ ಸವಾರ ಹಾರಿ ಬಿದ್ದಿದ್ದಾನೆ. ಅಪಘಾತದಲ್ಲಿ ಕಾರಿನ ಮುಂಭಾಗ ಹಾಗೂ ಬೈಕ್‌ಗೆ ಹಾನಿ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹರಪನಹಳ್ಳಿ ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಗಳು ಭೇಟಿ ನೀಡಿದ್ದು, ರಂಭಾಪುರಿ ಶ್ರೀಗಳನ್ನು ತೆಗ್ಗಿನ ಮಠಕ್ಕೆ ಕರೆದುಕೊಂಡು ಹೋಗಿ ಉಪಚರಿಸಿ ಬಳಿಕ ಕಳಿಸಿಕೊಟ್ಟಿದ್ದಾರೆ.
ರಂಭಾಪುರಿ ಶ್ರೀಗಳು ರಂಭಾಪುರಿ ಪೀಠದಿಂದ ಆಲಮಟ್ಟಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಇನ್ನು ಅಪಘಾತದಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.