Site icon Vistara News

Road Accident : ಜೆಸಿಬಿ ಸಮೇತ ನಾಲೆಗೆ ಉರುಳಿದ ವ್ಯಕ್ತಿ ಸಾವು; ಧಗ ಧಗೆನೇ ಹೊತ್ತಿ ಉರಿದ ಬಸ್‌!

road accident in mandya and fire accident in vijyapura

ಮಂಡ್ಯ/ವಿಜಯಪುರ : ನಾಲೆಗೆ ಜೆಸಿಬಿ ಪಲ್ಟಿಯಾಗಿ ಸ್ಥಳದಲ್ಲೆ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದ ಕೊಡಿಶೆಟ್ಟಿಪುರ ಬಳಿಯ ಜಕ್ಕನಹಳ್ಳಿ ರಸ್ತೆಯಲ್ಲಿರುವ ನಾಲೆಯಲ್ಲಿ (Road Accident) ಘಟನೆ ನಡೆದಿದೆ.

ತಮಿಳುನಾಡು ಮೂಲದ ಶಬರಿ (32) ಮೃತ ದುರ್ದೈವಿ. ಪಿಕೆಕೆಆರ್‌ಟಾರ್ ಪ್ಲಾಂಟ್‌ನಲ್ಲಿ ಶಬರಿ ಕೆಲಸ ಮಾಡುತ್ತಿದ್ದ. ಜೆಸಿಬಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಶುಕ್ರವಾರ ಕಾಲುವೆ ರಸ್ತೆಯಲ್ಲಿ ಹೋಗುವಾಗ ಆಯತಪ್ಪಿ ಜೆಸಿಬಿಯು ನಾಲೆಗೆ ಉರುಳಿದೆ. ಜೆಸಿಬಿ ಅಡಿಗೆ ಸಿಲುಕಿ ಶಬರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Physical Abuse : ಬೆಂಗಳೂರಲ್ಲಿ ಯುವತಿ ಪ್ರಜ್ಞೆ ತಪ್ಪಿಸಿ ಗ್ಯಾಂಗ್‌ ರೇಪ್‌!

ಚಲಿಸುತ್ತಿದ್ದಂತೆ ಬಸ್‌ನಲ್ಲಿ ಬೆಂಕಿ- ಓಡಿ ಹೋದ ಪ್ರಯಾಣಿಕರು!

ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಬಸ್‌ವೊಂದು ಹೊತ್ತಿ ಉರಿದಿದೆ. ಜನತಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಪೂರ್ತಿ ಸುಟ್ಟು ಕರಕಲಾಗಿದೆ. ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿ ಎನ್‌ಎಚ್ 50ರಲ್ಲಿ ಶುಕ್ರವಾರ ಬೆಳಗ್ಗೆ 6.30ಕ್ಕೆ ಚಲಿಸುತ್ತಿದ್ದ ಬಸ್‌ನ ಎಡಬದಿಯಲ್ಲಿರುವ ಹಿಂಭಾಗದ ಟೈರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದನ್ನೂ ಗಮನಿಸಿದ ಚಾಲಕ ಕೂಡಲೇ ಕೂಡಲೇ ಎಚ್ಚೆತ್ತುಕೊಂಡು ಎಲ್ಲ ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ. ನೋಡನೋಡುತ್ತಿದ್ದಂತೆ ಬಸ್‌ನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕಿಡಿಯು ಕ್ಷಣ ಮಾತ್ರದಲ್ಲಿ ವ್ಯಾಪಿಸಿ ಸುಟ್ಟುಕರಲಾಗಿದೆ. ಬಸ್‌ನೊಳಗೆ ಇದ್ದ ಪ್ರಯಾಣಿಕರ ಲಗೇಜ್‌ ಹಾಗೂ ಅದರೊಳಗೆ ಇದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 36 ಮಂದಿ ಸೇಫಾಗಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು, ಅಗ್ನಿ ಶಾಮಕ‌ ದಳ ದೌಡಾಯಿಸಿ ಬೆಂಕಿ ನಂದಿಸಲು ಮುಂದಾದರು. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟರು.

ಶಿರಾದಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರ ದಾರುಣ ಸಾವು

ತುಮಕೂರು: ಬೈಕ್‌ಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಇಬ್ಬರು ಸವಾರರು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯವಾಗ ಭೀಕರ ಅಪಘಾತ (Road Accident) ನಡೆದಿದ್ದು, ಹಿಂಬದಿಯಿಂದ ಕಾರು ಗುದ್ದಿದ್ದರಿಂದ ಬೈಕ್‌ ಸವಾರರು ಕೊನೆಯುಸಿರೆಳೆದಿದ್ದಾರೆ.

ಜೋಗಿಹಳ್ಳಿಯ ಶ್ರೀಧರ್ (28), ಮುನಿರಾಜು (25) ಮೃತ ಯುವಕರು. ಅನಾರೋಗ್ಯದಿಂದ ಬಳಲುತ್ತಿದ್ದ ಮುನಿರಾಜುನನ್ನು ಚಿಕಿತ್ಸೆಗೆಂದು ಬೈಕ್‌ನಲ್ಲಿ ಕರೆದುಕೊಂಡು ಹೋಗುವಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರು ಬೈಕ್‌ಗೆ ಗುದ್ದಿದ ಬಳಿಕ ಸುಮಾರು 200 ಮೀ. ದೂರ ಎಳೆದುಕೊಂಡು ಹೋಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಇಬ್ಬರು ಸವಾರರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ನಡೆದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.

ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರ ದುರ್ಮರಣ

ವಿಜಯಪುರ: ಕಬ್ಬು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆ ಬಬಲೇಶ್ವರ ತಾಲೂಕಿನ ಎಚ್.ಎಚ್. ಸಂಗಾಪುರ ಕ್ರಾಸ್ ಬಳಿ ನಡೆದಿದೆ. ಮೃತ ಬೈಕ್ ಸವಾರರು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಮೂಲದವರಾಗಿದ್ದು, ಅವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಬಲೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಂದಕಕ್ಕೆ ಕಾರು ಉರುಳಿ ಬಿದ್ದು ತಂದೆ-ಮಗನಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ಅರಣ್ಯದ ಕಣಿವೆಯಲ್ಲಿ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿ ಬಿದ್ದಿದ್ದರಿಂದ ತಂದೆ-ಮಗನಿಗೆ ಗಂಭೀರ ಗಾಯಗಳಾಗಿವೆ. ರಮೇಶ್ ಹಾಗೂ ಪುತ್ರ ಗಾಯಾಳುಗಳು. ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಅರಣ್ಯ ಪ್ರದೇಶದಲ್ಲಿ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ತಂದೆ-ಮಗ ಪಾರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version