ಬೆಂಗಳೂರು: ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಕೆಎಸ್ಆರ್‌ಟಿಸಿ ಬಸ್ ಗುದ್ದಿ (Road Accident) ಬೈಕ್ ಸವಾರ ಮೃತಪಟ್ಟಿದ್ದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಟೋಲ್ ಕಟ್ಟುವುದನ್ನು ತಪ್ಪಿಸಲು ಹೋಗಿ ಈ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ.
ಮೈಸೂರು ರಸ್ತೆಯ ಕಣ್ಮಿಣಿಕೆ ಬಳಿ ಇದ್ದ ಟೋಲ್ ಬಳಿ ಈ ಅವಘಡ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಕೆಎಸ್ಆರ್‌ಟಿಸಿ ಬಸ್ ಹೊರಟಿತ್ತು. ಕಣ್ಮಿಣಿಕೆ ಬಳಿ ಬೈಕ್ ಸವಾರರು ಬರುತ್ತಿದ್ದರು. ಆದರೆ, ಬಸ್ ಚಾಲಕ ಟೋಲ್ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ಪುನಃ ರಿಟರ್ನ್ ತೆಗೆದುಕೊಂಡು ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಸಂಚರಿಸಿದ್ದೇ ಈ ಅವಘಡಕ್ಕೆ ಕಾರಣವಾಗಿದೆ.
ಬಸ್ ಏಕಮುಖ ಮಾರ್ಗದಲ್ಲಿ ವಾಪಸ್ ಬರುತ್ತಿರುವುದು ಸವಾರರ ಗಮನಕ್ಕೆ ಬಂದಿಲ್ಲ. ಹೀಗಾಗಿ ಬೈಕ್‌ಗೆ ಬಸ್ ಗುದ್ದಿದೆ. ಇದರಿಂದ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತನ ಹಾಗೂ ಗಾಯಗೊಂಡವನ ವಿವರ ಇನ್ನೂ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಬಂದು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Hombale Films: ಇಟಾಲಿಯನ್, ಸ್ಪ್ಯಾನಿಶ್ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ ಕಾಂತಾರ; ಹೊಂಬಾಳೆಯಿಂದ ಸಿಹಿ ಸುದ್ದಿ!
ವಿದ್ಯುತ್ ಶಾಕ್‌ನಿಂದ ತಾಯಿ ಮತ್ತು ಇಬ್ಬರು ಮಕ್ಕಳ ಸಾವು
ಕಲಬುರಗಿ: ವಿದ್ಯುತ್ ಶಾಕ್ ಹೊಡೆದು ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೀಡಾದ ದುರ್ಘಟನೆ ಚಿಂಚೋಳಿ ಪಟ್ಟಣದ ಧನಗರಗಲ್ಲಿ ಬಡಾವಣೆಯಲ್ಲಿ (Death by electric shock) ಸಂಭವಿಸಿದೆ. ಝರಣಮ್ಮ ಅಂಬಣ್ಣಾ (45), ಮಹೇಶ್ (22) ಮತ್ತು ಸುರೇಶ್ (20) ಮೃತಪಟ್ಟಿದ್ದಾರೆ. ತಾಯಿ ಮತ್ತು ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸರ್ವಿಸ್ ವಿದ್ಯುತ್ ವೈರ್ ಕಡಿದು ಬಿದ್ದಿತ್ತು. ನೆಲಕ್ಕೆ ಬಿದ್ದಿದ್ದ ಸರ್ವಿಸ್ ವೈರ್‌ನಿಂದ ಕರೆಂಟ್ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟರು. ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.