ಆನೇಕಲ್: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಶಾಲಾ ಬಾಲಕಿಯೊಬ್ಬಳು (Road Accident) ಮೃತಪಟ್ಟಿದ್ದಾಳೆ. ಲಕ್ಷ್ಮೀ ಪ್ರಿಯಾ ಜಾಮಿ (7) ಮೃತ ಬಾಲಕಿ. ಆನೇಕಲ್ ತಾಲೂಕಿನ ಹಳೇ ಚಂದಾಪುರದಲ್ಲಿ ತಂದೆ ಜತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಲಾರಿ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಶಾಲೆಯಿಂದ ಮಗಳನ್ನು ಬೈಕ್‌ನಲ್ಲಿ ಕರೆತರುತ್ತಿದ್ದಾಗ ಚಂದಾಪುರ ರೈಲ್ವೆ ಅಂಡರ್ ಪಾಸ್ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೆಳಗೆ ಬಿದ್ದ ರಭಸಕ್ಕೆ ಲಕ್ಷ್ಮೀ ಉಸಿರು ಚೆಲ್ಲಿದ್ದಾಳೆ. ತಂದೆ ತೇಜಸ್ವರ್ ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಮೂಲದ ತೇಜಸ್ವರ್ ದಂಪತಿ ಅಡಿಸೊನ್ನಟ್ಟಿ ರಸ್ತೆಯ ಗ್ರೀನ್ ಆಪಲ್ ಹೈಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಹಳೇ ಚಂದಾಪುರದ ನಜರತ್ ಶಾಲೆಯಲ್ಲಿ ಲಕ್ಷ್ಮೀ ಮೂರನೇ ತರಗತಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ.
ಚಂದಾಪುರ ರೈಲ್ವೆ ಅಂಡರ್ ಪಾಸ್ ಕಳೆದ ಹದಿನೈದು ದಿನಗಳಲ್ಲಿ ಇದು ಮೂರನೇ ಅಪಘಾತವಾಗಿದ್ದು, ಸಾರ್ವಜನಿಕರು ಕಿಡಿಕಾರಿದ್ದಾರೆ. ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳು ಯಾರು ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ
ಚಿಕ್ಕಬಳ್ಳಾಪುರದ ಆಂಧ್ರಪ್ರದೇಶ- ಕರ್ನಾಟಕ ಗಡಿಯ ಚೀಲಮತ್ತೂರು ಬಳಿ ಭೀಕರ ಅಪಘಾತ (Road Accident) ಸಂಭವಿಸಿದೆ. ಕಾರು ಮತ್ತು ಬುಲೆರೋ ಗೂಡ್ಸ್ ವಾಹನ ನಡುವೆ ಮುಖಮುಖಿ ಡಿಕ್ಕಿಯಾಗಿ, ಬುಲೆರೋ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಬಾಗೇಪಲ್ಲಿಯ ವೆಂಕಟೇಶ್ ಎಂಬ ವ್ಯಕ್ತಿಗೆ ಸೇರಿದ ಫರ್ಚುನರ್ ವಾಹನ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಚೀಲಮತ್ತೂರು ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಉಳಿದ ಗಾಯಳುಗಳನ್ನು ಚೀಲಮತ್ತೂರು ಮತ್ತು ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ಇದೆ. ಫಾರ್ಚುನರ್ ವಾಹನದ ಅತಿ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಶಾಸಕರಿದ್ದ ಕಾರಿನ ಟಯರ್ ಸ್ಫೋಟ
ಉಡುಪಿ: ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ತೆಲಂಗಾಣ ಶಾಸಕ ರೋಹಿತ್ ರೆಡ್ಡಿ ಮಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದರು. ಉಡುಪಿಯ ಕಾರ್ಕಳ ತಾಲೂಕಿನ ಮಿಯ್ಯಾರು ಸೇತುವೆ ಬಳಿ ವೇಗವಾಗಿ ಸಾಗುತ್ತಿದ್ದಾಗ ಕಾರಿನ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Viral News : ಸಾಕು ನಾಯಿಗಳನ್ನು ಕೂಡಿ ಹಾಕಿ 6 ತಿಂಗಳು ಟ್ರಿಪ್ ಹೋದ ಮಾಲೀಕ!
ಟಿಪ್ಪರ್- ಲಾರಿ ಮುಖಾಮುಖಿ ಡಿಕ್ಕಿ, ಓರ್ವ ಸಾವು
ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 44ರ ಹೂನೇಗಲ್ ಗ್ರಾಮದ ಬಳಿ ಟಿಪ್ಪರ್ ಹಾಗೂ ಕ್ಯಾಂಟರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ಕ್ಲೀನರ್ ಬಂಗಾರಪೇಟೆ ಮೂಲದ ಮಹ್ಮದ್ ಆಸಿಫ್ ಆಲಿ (48) ಮೃತ ದುರ್ದೈವಿ. ಅಪಘಾತದಲ್ಲಿ ಜಾವಿದ್ ಎಂಬಾತನಿಗೆ ಗಂಭೀರ ಗಾಯಗೊಂಡಿದ್ದಾರೆ.
ಕ್ಯಾಂಟರ್ ಲಾರಿ ಯೂಟರ್ನ್ ಮಾಡುವಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಶನಿವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ದುರ್ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ