Site icon Vistara News

Road Accident: ತಿರುಪತಿಗೆ ಹೋಗುತ್ತಿದ್ದ ಬಸ್‌ ಪಲ್ಟಿ; ಅಕ್ಕನ ಮದುವೆಯ ದಿನದಂದೇ ಸ್ಮಶಾನ ಸೇರಿದ ತಮ್ಮ

road accident

road accident

ಕೋಲಾರ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯ ಬಳಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್‌ವೊಂದು (Road Accident) ಪಲ್ಟಿಯಾಗಿದೆ. ರಸ್ತೆ ಬದಿಯ ಹಳ್ಳಕ್ಕೆ ಬಸ್‌ ಬಿದ್ದಿದ್ದು, ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ತಿರುಪತಿಗೆ ಹೋಗುತ್ತಿದ್ದ ಬಸ್ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರ ಸಹಾಯದೊಂದಿಗೆ ಮದನಪಲ್ಲಿಯ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಅಪಘಾತದಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಖಾಸಗಿ ಬಸ್ ಅಪಘಾತದಲ್ಲಿ ಗಾಯಗೊಂಡಂತಹ ಬಹುತೇಕರು ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಿಂದ ತಿರುಪತಿ ಹಾಗೂ ಮದನಪಲ್ಲಿಗೆ ತೆರಳಿದ್ದ ಪ್ರಯಾಣಿಕರು ಎಂದು ತಿಳಿದು ಬಂದಿದೆ.

ಮದನಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಅತಿ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಅಪಘಾತದಲ್ಲಿ ಮೃತಪಟ್ಟ ಬೈಕ್‌ ಸವಾರ ಶಿವು

ಅಕ್ಕನ ಮದುವೆಯ ದಿನದಂದೇ ಸ್ಮಶಾನ ಸೇರಿದ ತಮ್ಮ

ಮೈಸೂರಿನ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಲಿಯೂರು ಗ್ರಾಮದ ಶಿವು (24) ಮೃತ ದುರ್ದೈವಿ. ಶಿವು ತನ್ನ ಅಕ್ಕನ ಮದುವೆಯ ಸಂಭ್ರಮದಲ್ಲಿದ್ದ. ಅಕ್ಕನ ಮದುವೆಗೆ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಮದುವೆಯ ಸಂತಸ ಇರಬೇಕಾದ ಜಾಗದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಸ್ಥಳಕ್ಕೆ ಬನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಭೀಕರ ಅಪಘಾತದಲ್ಲಿ ಚಾಲಕ ದುರ್ಮರಣ

ಕೋಲಾರದ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗ್ರಾಮದ ಬಳಿ ಲಾರಿ ಹಾಗೂ ಈಚರ್ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದ್ದು, ಈಚರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಹಾಗೂ ಸಹಾಯಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಳಬಾಗಿಲು ಹಾಗೂ ಶ್ರೀನಿವಾಸಪುರ ಹೆದ್ದಾರಿಯಲ್ಲಿ ಮುಂಜಾನೆ ಸುಮಾರು 3 ಗಂಟೆಯ ಸಮಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಬಸ್‌ಗೆ ಟಿಟಿ ಡಿಕ್ಕಿ, ಇಬ್ಬರ ದುರ್ಮರಣ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಡಿ.ಹೊಸಹಳ್ಳಿ ಬಳಿ ನಿಂತಿದ್ದ ಬಸ್‌ಗೆ ಟೆಂಪೊ ಟ್ರಾವೆಲರ್‌ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನವರಾದ ವೀರೇಶ್ (30) ಮತ್ತು ಶಶಿಕಲಾ(79) ಮೃತಪಟ್ಟಿದ್ದಾರೆ. ಅವರ ಜತೆಗೆ ದಿಲೀಪ್ ಕುಮಾರ್, ಆನಂದ್ ಕುಮಾರ್, ಪ್ರಿಯಾ, ಪ್ರತೀಕ್ಷಾ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇವರೆಲ್ಲರೂ ರಾಯಚೂರಿನ ಸಿಂಧನೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟಿದ್ದರು. ಶಶಿಕಲಾ ಅವರು ಕುಟುಂಬದ ಹಿರಿಯರಾಗಿದ್ದು, ಅವರ ಮನೆಯವರೆಲ್ಲರೂ ಟೆಂಪೊ ಟ್ರಾವೆಲರ್‌ ಮೂಲಕ ಮೈಸೂರಿಗೆ ಪ್ರವಾಸಕ್ಕೆಂದು ಹೋಗುತ್ತಿದ್ದರು. ಟಿಟಿ ವಾಹನದಲ್ಲಿ ಒಟ್ಟು 11 ಮಂದಿ ಪ್ರಯಾಣಿಸುತಿದ್ದರು.

ಇದನ್ನೂ ಓದಿ: Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ವೃದ್ಧೆ ಸಾವು; ಭೀಕರ ಅಪಘಾತದಲ್ಲಿ ಚಾಲಕ ದುರ್ಮರಣ

ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಡಿ.ಹೊಸಹಳ್ಳಿ ಬಳಿ ಟೆಂಪೊ ಟ್ರಾವೆಲರ್‌ ನಿಂತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಶಶಿಕಲಾ ಮತ್ತು ವೀರೇಶ್‌ ಮೃತಪಟ್ಟಿದ್ದಾರೆ. ಹುಲಿಯೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version