ಮೈಸೂರು/ಶಿವಮೊಗ್ಗ/ಕೊಡಗು: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಸಾವು-ನೋವಿಗೆ ಕಾರಣವಾಗಿದೆ. ಕಾರು ಅಪಘಾತದಲ್ಲಿ ಮೈಸೂರಿನ ಬಿಜೆಪಿ ಮುಖಂಡ ಮೃತಪಟ್ಟಿರುವ ದುರ್ಘಟನೆ ಊಟಿಯಲ್ಲಿ ನಡೆದಿದೆ. ಮೈಸೂರಿನ ನರಸಿಂಹರಾಜ ಕ್ಷೇತ್ರದ ಬಿಜೆಪಿ ಮುಖಂಡ ಸ್ವಾಮಿಗೌಡ ಎಂಬುವವರು ಮೃತಪಟ್ಟಿದ್ದಾರೆ.
ಸ್ವಾಮಿಗೌಡ ಅವರು ನರಸಿಂಹರಾಜ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸ್ನೇಹಿತರೊಂದಿಗೆ ಊಟಿ ಪ್ರವಾಸಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಸ್ವಾಮಿಗೌಡ ಅವರ ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರ ರಕ್ತಸ್ರಾವವಾಗಿ ಸ್ವಾಮಿಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಉಳಿದ ಮೂವರಿಗೆ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಲಗೇಜು ಆಟೋಗೆ ಡಿಕ್ಕಿ ಹೊಡೆದ ಬೊಲೆರೋ
ಶಿವಮೊಗ್ಗದ ಶಿಕಾರಿಪುರದ ಜಕ್ಕನಹಳ್ಳಿ ಸಮೀಪ ಲಗೇಜು ಆಟೋಗೆ ಹಿಂಬದಿಯಿಂದ ಬಂದ ಬೊಲೆರೋ ವಾಹನವು ಡಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧರೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಬಿದರಕೊಪ್ಪ ತಾಂಡ ವಾಸಿ ರಾಮ್‌ಜಿ ನಾಯ್ಕ (72) ಮೃತ ದುರ್ದೈವಿ.
ತೊಟ್ಟಿಲು ಶಾಸ್ತ್ರ ಕಾರ್ಯಕ್ರಮಕ್ಕಾಗಿ ಆಟೋದಲ್ಲಿ ಬಿದರಕೊಪ್ಪ ತಾಂಡದಿಂದ ಎಳನೀರುಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದು, ಆಟೋದಲ್ಲಿದ್ದವರೆಲ್ಲ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ, ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಇನ್ನು ಆಟೋದಲ್ಲಿ ಕಾಲು ಹೊರಕ್ಕೆ ಹಾಕಿ ಕುಳಿತಿದ್ದವರ ಕಾಲಿಗೆ ಬೊಲೆರೋ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ. ಹಲವರನ್ನು ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: Road Accident: ಕಾರಿಗೆ ಗುದ್ದಿ ಪರಾರಿಯಾದ ಲಾರಿ ಚಾಲಕ, ಬೈಕ್‌ಗೆ ಗುದ್ದಿ ಮೂವರ ಜೀವ ತೆಗೆದ
ಭೀಕರ ಅಪಘಾತದಲ್ಲಿ ಸವಾರ ಸಾವು
ಕೊಡಗಿನ ನಾಪೋಕ್ಲು-ಮೂರ್ನಾಡು ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸ್ಕೂಟರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೂರ್ನಾಡು ರಸ್ತೆಯ ಹೊದವಾಡ ಗ್ರಾಮದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ. ನಾಪೋಕ್ಲುವಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಪ್ಪಾಜಿ (19) ಮೃತ ದುರ್ದೈವಿ. ಸ್ಕೂಟರ್‌ನ ಹಿಂಬದಿ ಸವಾರನಿಗೂ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಾಫೋಕ್ಲು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ