ಮಂಗಳೂರು: ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್ ಒಂದು ಇದ್ದಕ್ಕಿದ್ದಂತೆಯೇ ಬ್ರೇಕ್ ಫೇಲ್ ಆಗಿ ಕಾಡಿನ ಒಳಗೆ ನುಗ್ಗಿದ ಘಟನೆ (Road accident) ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಡೆದಿದೆ. ಬಸ್ಸಿನಲ್ಲಿ ೨೧ ಜನರಿದ್ದು, ಈ ಪೈಕಿ ೧೫ ಜನರಿಗೆ ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಳ್ಳಾರಿಯ ಜಿಲ್ಲೆಯ ಕೂಡ್ಲಿಗಿ ತಾಲೂಕಿನ 21 ಜನ ಮಿನಿ ಬಸ್‌ನಲ್ಲಿ ಶಬರಿಮಲೆಗೆ ಪ್ರಯಾಣಿಸುತ್ತಿದ್ದರು. ಬಸ್ಸು ಮುಂಡಾಜೆ ಬಳಿ ಒಮ್ಮೆಗೇ ಬ್ರೇಕ್ ಫೇಲ್ ಆಗಿದ್ದರಿಂದ ಕೂಡಲೇ ನಿಲ್ಲಿಸುವ ಉದ್ದೇಶದಿಂದ ಎಂಬಂತೆ ಚಾಲಕ ರಸ್ತೆ ಬದಿಯ ಕಾಡಿನ ಕಡೆಗೆ ನುಗ್ಗಿಸಿದ್ದಾನೆ. ಪಕ್ಕದ ಅಡೆತಡೆಗಳಿಂದಾಗಿ ಬಸ್ಸು ಮುಂದೆ ಚಲಿಸದೆ ನಿಂತಿದೆ. ಹೀಗಾಗಿ ದೊಡ್ಡ ಅಪಾಯ ತಪ್ಪಿದೆ. ಆದರೆ ಏಕಾಏಕಿ ವಾಹನ ಎರ‍್ರಾಬಿರ‍್ರಿ ಚಲಿಸಿದ್ದರಿಂದ ಹಲವರಿಗೆ ಗಾಯಗಳಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಆರು ಆಂಬ್ಯುಲೆನ್ಸ್‌ಗಳು ಧಾವಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸರು ಕೂಡಾ ದೌಡಾಯಿಸಿದ್ದಾರೆ. ಬಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಗಳೂರು ಮತ್ತು ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 15 ಮಂದಿಗೆ ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕಳುಹಿಸಲಾಯಿತು.
ಮುರ ರೈಲ್ವೇ ಹಳಿ ಚರಂಡಿಯಲ್ಲಿ ಮೃತ ದೇಹ ಪತ್ತೆ
ಪುತ್ತೂರು: ಮುರ ರೈಲ್ವೇ ಸೇತುವೆ ಬಳಿಯ ಹಳಿ ಚರಂಡಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆ ಡಿ.23ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಚರಂಡಿಯಲ್ಲಿ ಕೆಳಮುಖವಾಗಿ ಬಿದ್ದ ಕಾರಣ ಗುರುತು ಪತ್ತೆಯಾಗಿಲ್ಲ.. ರೈಲ್ವೇ ಪೋಲಿಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಷ್ಟೇ ಎಂದು ಹೇಳಲಾಗಿದೆ.
ಇದನ್ನೂ ಓದಿ | Road accident | ಟಂಟಂಗೆ ಟ್ರ್ಯಾಕ್ಟರ್ ಡಿಕ್ಕಿ: ಇಬ್ಬರು ಕ್ರೀಡಾಪಟುಗಳು ಸ್ಥಳದಲ್ಲೇ ಮೃತ್ಯು, ಐವರಿಗೆ ಗಂಭೀರ ಗಾಯ