Site icon Vistara News

Road accident | ಚನ್ನಪಟ್ಟಣ ಬಳಿ ಖಾಸಗಿ ಬಸ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವು

Magadi accident

ರಾಮನಗರ: ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ (Road accident) ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆ ಬಳಿ ಸೋಮವಾರ ಮಧ್ಯಾಹ್ನದ ಹೊತ್ತು ಸಂಭವಿಸಿದೆ. ರಾಮನಗರ ತಾಲೂಕಿನ ತಡಿಕವಾಗಿಲು ನಿವಾಸಿ ಶಿವಸ್ವಾಮಿ(51) ಮೃತಪಟ್ಟವರು.

ಶಿವಸ್ವಾಮಿ ಅವರು ಚನ್ನಪಟ್ಟಣದಿಂದ ರಾಮನಗರದ ಕಡೆಗೆ ಬರುತ್ತಿರುವಾಗ ಬಸ್ಸೊಂದು ಅವರ ಬೈಕ್‌ಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ರಭಸಕ್ಕೆ ಶಿವಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಮತ್ತಷ್ಟು ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ಮುಂದೆ ಡಿವೈಡರ್‌ಗೂ ಗುದ್ದಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಚಾಲಕ ಅಸ್ವಸ್ಥನಾಗಿ ಅಡ್ಡಾದಿಡ್ಡಿ ಚಲಿಸಿದ ಕಾರು
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕಾರು ಚಾಲಕನೊಬ್ಬ ಚಾಲನೆಯ ವೇಳೆ ಅಸ್ವಸ್ಥಗೊಂಡ ಪರಿಣಾಮ ಕಾರು ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಚಲಿಸಿ ಸರಣಿ ಅಪಘಾತ ಸಂಭವಿಸಿದೆ. ಪರಿಣಾಮ ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಎಂಟು ವಾಹನಗಳು ಜಖಂ ಆಗಿವೆ. ಹಲವಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

accident

ಇದ್ದಕ್ಕಿದ್ದಂತೆ ಫಿಟ್ಸ್‌ ಅಟ್ಯಾಕ್‌ (ಅಪಸ್ಮಾರ) ಉಂಟಾದ ಕಾರಣ ಚಾಲಕ ಕಾರು ನಿಯಂತ್ರಿಸಲಾಗದೆ ಆಕ್ಸಿಲರೇಟರ್‌ ಮೇಲೆ ಬಲವಾಗಿ ಕಾಲಿಟ್ಟು ಕಾರಿನ ಸ್ಟಿಯರಿಂಗ್‌ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದ. ಪರಿಣಾಮ ಕಾರು ನಿಯಂತ್ರಣವಿಲ್ಲದೆ ಚಲಿಸಿತ್ತಲ್ಲದೆ, ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಮುನ್ನುಗ್ಗಿ ಮತ್ತಷ್ಟು ಬೈಕ್ ಕಾರುಗಳಿಗೆ ಉಜ್ಜಿಕೊಂಡು ಹೋಗಿದೆ.

ಸುಮಾರು ಅರ್ಧ ಕಿ.ಮೀ ದೂರ ಹೀಗೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಮುನ್ನುಗ್ಗಿದ ಕಾರು ಬಳಿಕ ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಗೇಟ್ ಬಳಿ ನಿಂತಿತ್ತು. ಕೊನೆಗೂ ಸಿಕ್ಕಿ ಬಿದ್ದ ಕಾರು ಚಾಲಕನನ್ನು ಹಿಡಿದು ತದುಕೋಣ ಎಂದು ದೌಡಾಯಿಸಿದವರಿಗೆ ಚಾಲಕನ ಸ್ಥಿತಿ ಕಂಡು ಬಂದಿದ್ದ ಕೋಪವೂ ಹೊರಟುಹೋಗಿದೆ. ಜಗಳಕ್ಕೆ ಹೋದವರು ಆಂಬ್ಯುಲೆನ್ಸ್ ಕರೆಸಿ ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಇದೆಲ್ಲದಕ್ಕೂ ಕಾರಣವಾಗಿದ್ದು, ಕಾರು ಚಾಲಕನಿಗೆ ಬಂದಿದ್ದ ಮೂರ್ಛೆ ರೋಗ. ಅಪಘಾತದಲ್ಲಿ ಬರೋಬರಿ ಎಂಟು ಗಾಡಿಗಳು ಡ್ಯಾಮೇಜ್ ಆಗಿವೆ. ಹಲವು ಬೈಕ್ ಸವಾರರು ಹಾಗೂ ಪಾದಚಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಿಗ್ಗಿ ಡೆಲವರಿ ಬಾಯ್‌ಗೆ ಗಂಭೀರವಾದ ಗಾಯವಾಗಿದ್ದು, ಏಳು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಜಖಂಗೊಂಡ ಕಾರುಗಳ ಮಾಲೀಕರು ಇನ್ಸೂರೆನ್ಸ್ ಮೊರೆ ಹೋಗಿದ್ದು, ಹೆಚ್‌ಎಸ್‌ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಅಪಘಾತ ಗಾಯಾಳುವಿಗೆ ನೆರವು, ಮಾನವೀಯತೆ ಮೆರೆದ ಗುಬ್ಬಿ ಶಾಸಕ ಶ್ರೀನಿವಾಸ್

Exit mobile version