ಬೆಳಗಾವಿ: ಜಿಲ್ಲೆಯ ರಾಮದುರ್ಗ ಬಳಿ ಮಹೀಂದ್ರ ಬೊಲೆರೊ ಗೂಡ್ಸ್ ವಾಹನ ಆಲದ ಮರಕ್ಕೆ ಡಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಆರು ಮಂದಿಯ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ೫ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ರಾಮದುರ್ಗಕ್ಕೆ ಸಮೀಪದ ಚುಂಚನೂರು ಗ್ರಾಮದಲ್ಲಿ ಸಂಭವಿಸಿದ್ದ ಈ ಅಪಘಾತದಲ್ಲಿ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳುತ್ತಿದ್ದ ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ೧೬ ಮಂದಿ ಗಾಯಗೊಂಡಿದ್ದಾರೆ.
ಪಾದಯಾತ್ರೆ ಮೂಲಕ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರನ್ನು ಗೂಡ್ಸ್ ವಾಹನ ಚಾಲಕನೊಬ್ಬ ಗಾಡಿ ಖಾಲಿ ಇದೆ, ಚಳಿಯೂ ಇದೆ ಬನ್ನಿ ಎಂದು ಕರೆದು ಕೂರಿಸಿಕೊಂಡು ಸಾಗಿದ್ದೇ ಪಾದ ಯಾತ್ರೆ ಶವಯಾತ್ರೆಯಾಗಲು ಕಾರಣವಾಗಿದೆ. ಮೃತರನ್ನು ಮದುರ್ಗ ತಾಲೂಕಿನ ಹುಲಕುಂದ ಗ್ರಾಮದವರಾದ ಹಣಮವ್ವ ಮ್ಯಾಗಾಡಿ (25), ದೀಪಾ ಹರಿಜನ (31), ಸವಿತಾ ಮುಂಡಾಸ (17) ಸುಪ್ರಿತಾ ಹರಿಜನ (11) ಯಲ್ಲಪ್ಪ ಬನ್ನೂರ (42) ಮತ್ತು ಇಂದ್ರವ್ವ ಸಿದ್ದಮೇಸ್ತ್ರಿ (೨೪) ಎಂದು ಗುರುತಿಸಲಾಗಿದೆ. ಗಾಯಗೊಂಡ 16 ಜನರನ್ನು ಗೋಕಾಕ್ ಸೇರಿ ವಿವಿಧ ಕಡೆಗಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಐದು ಲಕ್ಷ ರೂ. ಪರಿಹಾರ ಘೋಷಣೆ
ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ಸಚಿವ ಗೋವಿಂದ ಕಾರಜೋಳ ಅವರು ಪ್ರಕಟಿಸಿದ್ದಾರೆ. ʻʻಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸೂಚಿಸಿದರು. ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಮೃತರ ಕುಟುಂಬಕ್ಕೆ ಐದು ಲಕ್ಷ್ಮಿ ಪರಿಹಾರ ಪ್ರಕಟಿಸಿದ್ದೇನೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಡಿಎಚ್‌ಒ ಜೊತೆಗೂ ಮಾತನಾಡಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿʼʼ ಎಂದು ಅವರು ಪ್ರಾರ್ಥನೆ ಮಾಡಿದ್ದಾರೆ.