Site icon Vistara News

Road accident | ಬೈಕ್‌ಗೆ ಕೆಎಸ್ಸಾರ್ಟಿಸಿ ಬಸ್‌ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು: ಎರಡೂ ವಾಹನಗಳು ಭಸ್ಮ!

accident Krishnagiri

ಕೃಷ್ಣಗಿರಿ (ತಮಿಳುನಾಡು): ತಮಿಳುನಾಡಿನ ಕೃಷ್ಣಗಿರಿಯಲ್ಲಿ ಭಾನುವಾರ ಭೀಕರ ಅಪಘಾತವೊಂದು (Road accident) ಸಂಭವಿಸಿದೆ. ಬಸ್‌ ಒಂದು ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಇಂಥ ಘಟನೆಗಳು ಸಂಭವಿಸಿದಾಗ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗುತ್ತದೆ, ಬಸ್‌ನ ಎದುರು ಭಾಗದಲ್ಲಿ ಸಣ್ಣದೊಂದು ಡೆಂಟ್‌ ಬೀಳುತ್ತದೆ. ಆದರೆ, ಇಲ್ಲಿ ನಡೆದ ಅವಘಡದಲ್ಲಿ ಬೈಕ್‌ ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿದೆ. ಮಾತ್ರವಲ್ಲ, ಇಡೀ ಬಸ್‌ ಕೂಡಾ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕರಕಲಾಗಿದೆ. ಈ ರೀತಿ ಬೆಂಕಿ ಹಿಡಿದುಕೊಳ್ಳಲು ಏನು ಕಾರಣ ಎನ್ನುವುದು ಗೊತ್ತಾಗಿಲ್ಲ.

ತಮಿಳುನಾಡಿನ ಕೃಷ್ಣಗಿರಿ ಬಳಿಯ ಮೆಡಿಕಲ್ ಕಾಲೇಜು ಸಮೀಪ ಭಾನುವಾರ ಈ ಭೀಕರ ಅಪಘಾತ ನಡೆದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಈ ಬಸ್‌ ಎದುರಿನಿಂದ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಮರು ಕ್ಷಣವೇ ಬೈಕ್‌ಗೆ ಬೆಂಕಿ ಹತ್ತಿಕೊಂಡಿದೆ. ಸವಾರರಿಬ್ಬರೂ ಬೈಕ್‌ ಜತೆಗೆ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಅವರಿಬ್ಬರು ಯಾರು ಎನ್ನುವುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಬೆಂಕಿಯ ಕಿಡಿ ಹೊತ್ತಿಕೊಂಡು ಬಸ್‌ಗೆ ಬೆಂಕಿ ಹಿಡಿಯಿತು. ಕೂಡಲೇ ಬಸ್‌ನಲ್ಲಿದ್ದ ಎಲ್ಲ ೩೦ ಮಂದಿ ಹೊರಗೋಡಿ ಬಂದಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ. ಆದರೆ, ಬಸ್‌ ಮಾತ್ರ ಆರಂಭದಿಂದ ಕೊನೆಯವರೆಗೂ ಸುಟ್ಟು ಭಸ್ಮವಾಗಿದೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಂಪೂರ್ಣ ಸುಟ್ಟು ಹೋಗಿರುವ ಬಸ್‌

ಅಂತಿಮವಾಗಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಇದನ್ನೂ ಓದಿ | Road accident | ಸಿದ್ದಾಪುರ ಬಳಿ ಕಾರು-ಬೈಕ್‌ ಮುಖಾಮುಖಿ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಮೃತ್ಯು

Exit mobile version