ಕೊಪ್ಪಳ: ಕುಕನೂರು ತಾಲೂಕಿನ ಬನ್ನಿಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ.
ಹೆದ್ದಾರಿಯಲ್ಲಿರುವ ಬ್ರಿಡ್ಜ್ನ್ ಗೋಡೆಗೆ ವೇಗವಾಗಿ ಬಂದ ಕಾರು ಗುದ್ದಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಇವರೆಲ್ಲರೂ ಹೈದ್ರಾಬಾದ್ ಮೂಲದವರು ಎಂದು ಗೊತ್ತಾಗಿದೆ.
ಕೊಪ್ಪಳ ಮಾರ್ಗವಾಗಿ ಗದಗ ಕಡೆಗೆ ಇವರು ಕಾರಿನಲ್ಲಿ ತೆರುಳುತ್ತಿದ್ದರು ಎನ್ನಲಾಗಿದೆ. ಮೃತಪಟ್ಟವರ ಹೆಸರು ಹಾಗೂ ವಿಳಾಸಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕುಕನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ತನಿಖೆ ಕೈಗೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: 7th Pay Commission : ವೇತನ ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್ನಲ್ಲಿ ಘೋಷಣೆ; ಕಾಯ್ದಿರಿಸುವ ಹಣವೆಷ್ಟು?
ವೇಗವಾಗಿದ್ದ ಕಾರು ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಚಾಲಕನಿಗೆ ನಿದ್ರೆ ಮಂಪರು ಬಂದಿತ್ತೇ? ಇಲ್ಲವೇ ಯಾವುದಾದರೂ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.