ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿಯಾಗಿ ಚಾಲಕ ಹಾಗೂ ಪ್ರಯಾಣಿಕರೊಬ್ಬರು ಸ್ಥಳದಲ್ಲೆ (Road Accident) ಉಸಿರು ಚೆಲ್ಲಿದ್ದಾರೆ. ಸದಾನಂದ ಬೆಳಗಾವ್ (50), ವೀರಬಸಪ್ಪ (22) ಮೃತ ದುರ್ದೈವಿಗಳು.
ಬಸ್ ಬೆಂಗಳೂರಿನಿಂದ ಮಿರಜ್ ಕಡೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಪರಿಣಾಮ ಬಸ್ ಏಕಾಏಕಿ ಪಲ್ಟಿಯಾಗಿದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಬೈಕ್ ಮುಖಾಮುಖಿ ಡಿಕ್ಕಿ; ಸವಾರ ಸಾವು, ಮತ್ತೊಬ್ಬ ಗಂಭೀರ
ಚಿಕ್ಕಬಳ್ಳಾಪುರದ ಗೌರಿಬಿದನೂರು ರೈಲ್ವೆ ಮೇಲ್ಸೇತುವೆ ಮೇಲೆ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾರೆ. ಗೌರಿಬಿದನೂರು – ಮಧುಗಿರಿ ಮಾರ್ಗವಾಗಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಉದ್ಘಾಟನೆಗೆ ಸಿದ್ದವಾಗಿದ್ದ ಮೇಲ್ಸೇತುವೆ ಮೇಲೆ ಅಪಘಾತವಾಗಿದ್ದು, ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಟ್ಟು ನಿಂತ ಲಾರಿಗೆ ಸ್ಕೂಟರ್ ಡಿಕ್ಕಿ
ರಾಮನಗರದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ (Bangalore Mysore Expressway) ಅಪಘಾತಗಳ ತಾಣವಾಗುತ್ತಿದೆ ಎಂಬ ಆತಂಕ ಶುರುವಾಗಿದೆ. ಈ ನಡುವೆ ಬುಧವಾರ ಮತ್ತೊಂದು ಅಪಘಾತ (Road Accident) ಸಂಭವಿಸಿದೆ. ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಬೆಂಗಳೂರು- ಮೈಸೂರು ಹೆದ್ದಾರಿ ಬಿಡದಿ ಸಮೀಪದ ಕೆಂಪನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಮೃತರನ್ನು ಸನಾವುಲ್ಲಾ ಬೇಗಂ (65), ನೂರ್ ಜಹಾನ್ (60) ಎಂದು ಗುರುತಿಸಲಾಗಿದೆ. ಇಬ್ಬರೂ ಬೆಂಗಳೂರಿನ ಬಾಪೂಜಿ ನಗರದ ನಿವಾಸಿಗಳು. ಕಾರ್ಯಕ್ರಮ ನಿಮಿತ್ತ ರಾಮನಗರಕ್ಕೆ ಬಂದಿದ್ದು, ಪುನಃ ಹಿಂದಿರುಗುತ್ತಿದ್ದಾಗ ಕೆಟ್ಟು ನಿಂತಿದ್ದ ಲಾರಿ ಕಾಣದೆ ವೇಗವಾಗಿ ಬಂದು ಅಪ್ಪಳಿಸಿದ್ದಾರೆ ಎಂದು ತರ್ಕಿಸಲಾಗಿದೆ. ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಜರಾಜೇಶ್ವರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.
ಇದನ್ನೂ ಓದಿ: Bride Scarcity: ಈ ಸ್ಫುರದ್ರೂಪಿ ಹುಡುಗನಿಗೂ ಮದುವೆಯಾಗಲು ಹೆಣ್ಣು ಸಿಗಲಿಲ್ಲ; ಮನ ನೊಂದು ಆತ್ಮಹತ್ಯೆ
ಬಸ್ ಡಿಕ್ಕಿ, ಬೈಕ್ ಸವಾರರಿಬ್ಬರ ಸಾವು
ರಾಮನಗರ ವ್ಯಾಪ್ತಿಯಲ್ಲಿ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಮತ್ತಿಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಮೃತಪಟ್ಟಿದ್ದಾರೆ.
ಮಾಗಡಿ ನಗರದ ಸೋಮೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ. ಮೃತರನ್ನು ಮಾಗಡಿಯ ರಾಜೀವ್ ಗಾಂಧಿ ನಗರದ ನಿವಾಸಿಗಳಾದ ಪ್ರಶಾಂತ್ (22) ಹಾಗೂ ರಾಜು (45) ಎಂದು ಗುರುತಿಸಲಾಗಿದೆ. ಮಾಗಡಿಯಿಂದ ಕುಣಿಗಲ್‌ಗೆ ಹೋಗುತ್ತಿದ್ದ ಖಾಸಗಿ ಬಸ್, ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸವಾರರ ಬೈಕ್‌ಗೆ ಡಿಕ್ಕಿಯಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ