ಆನೇಕಲ್/ದೇವನಹಳ್ಳಿ/ ಮಂಡ್ಯ: ಆನೇಕಲ್ ತಾಲೂಕಿನ ಜಿಗಣಿ ಹಾಗೂ ಹಾರೋಹಳ್ಳಿ ಮುಖ್ಯ ರಸ್ತೆಯಲ್ಲಿ ಬುಲೆಟ್ ಗಾಡಿ ಸ್ಕಿಡ್ ಆಗಿ (road Accident) ಸವಾರನೊಬ್ಬ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಸಾತನೂರು ನಿವಾಸಿ ಶಿವಾ (24) ಮೃತ ದುರ್ದೈವಿ.
ಹಿಂಬದಿ ಸವಾರ ಈರಪ್ಪ ಎಂಬಾತನಿಗೆ ಗಂಭೀರ ಗಾಯವಾಗಿದೆ. ಇವರಿಬ್ಬರು ಮರಸೂರು ಗೇಟ್‌ನಿಂದ ಸಾತನೂರಿಗೆ ತೆರಳುತ್ತಿದ್ದರು. ಅತಿ ವೇಗವಾಗಿ ತೆರಳುತ್ತಿದ್ದಾಗ ಬೈಕ್ ಕಂಟ್ರೋಲ್‌ಗೆ ಬಾರದೆ ಸ್ಕಿಡ್ ಆಗಿದೆ. ಪರಿಣಾಮ ಶಿವಾ ಬೈಕ್‌ನಿಂದ ಎಗರಿ ರಸ್ತೆ ಬದಿಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಳೆದ ಒಂದು ವಾರದಲ್ಲಿ ಈ ರಸ್ತೆಯಲ್ಲಿ ಎರಡನೇ ಅಪಘಾತವಾಗಿದೆ. ಕಳೆದ ವಾರ ಇದೇ ಸ್ಥಳದಲ್ಲಿ ಟಿಪ್ಪರ್ ಲಾರಿ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದರು. ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೈಕ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ, ಚಾಲಕ ಸಾವು
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಕ್ರಾಸ್ ಸಮೀಪ ಬೈಕ್ ಹಾಗೂ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿದ. ಘಟನೆಯಲ್ಲಿ ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ರೈತ ಮೈಬೂಬ್ ಸಾಬ್ (50) ಮೃತಪಟ್ಟಿದ್ದಾರೆ.
ಮೈಬೂಬ್ ಸಾಬ್ ಕೋಡಾಲ ಗ್ರಾಮದಿಂದ ಶಹಾಪುರಕಡೆ ಟ್ರಾಕ್ಟರ್ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ ಆಗಿದೆ. ಸ್ಥಳದಲ್ಲಿಯೇ ಮೈಬೂಬ್ ಸಾಬ್ ಮೃತಪಟ್ಟಿದ್ದಾರೆ. ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಹಳ್ಳಕ್ಕೆ ಬಿದ್ದ ಕಾರು
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಣಸೇಮರದದೊಡ್ಡಿ ಗ್ರಾಮದ ಸಮೀಪ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಹಳ್ಳಕ್ಕೆ ಕಾರೊಂದು ಬಿದ್ದಿದೆ. ಮೈಸೂರಿನಿಂದ ತುಮಕೂರಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.
ಅದೃಷ್ಟವಶಾತ್ ಕಾರು ಚಾಲಕ ಜಯರಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು-ಮೈಸೂರು ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಿಎಂಟಿಸಿಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ
ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆ ಗೇಟ್ ಬಳಿ ಬಿಎಂಟಿಸಿ ಬಸ್‌ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜು ಆಗಿದೆ. ಮಾತ್ರವಲ್ಲದೆ ಬಿಎಂಟಿಸಿ ಬಸ್ ಹಿಂಭಾಗ ಪೂರ್ತಿ ಜಖಂಗೊಂಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬಸ್‌ನಲ್ಲಿ ಕೆಲವೇ ಕೆಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ದೇವನಹಳ್ಳಿಯಿಂದ ಕೆ.ಆರ್.ಮಾರ್ಕೆಟ್ ಬಿಎಂಟಿಸಿ ಬಸ್ ಹೊರಟಿತ್ತು. ಬಸ್‌ನಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಲಾರಿ ಚಾಲಕ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಪಘಾತದಿಂದ ಕಿ.ಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ