Site icon Vistara News

Road Accident: ಟಂಟಂ ಪಲ್ಟಿಯಾಗಿ ಪ್ರಾಣ ಬಿಟ್ಟ ಶಾಲಾ ಬಾಲಕ; ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೈಕ್‌ ಸವಾರರು

Terrible accident between cruiser and lorry

ಕಲಬುರಗಿ: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಗೊಬ್ಬುರುವಾಡಿ ಗ್ರಾಮದಲ್ಲಿ ಟಂಟಂ ಪಲ್ಟಿ ಆಗಿ ಶಾಲಾ ಬಾಲಕ ಮೃತಪಟ್ಟಿರುವ (Road Accident) ಘಟನೆ ನಡೆದಿದೆ. ಬಸವರಾಜ್ ಸನಗುಂದೆ (9) ಮೃತ ದುರ್ದೈವಿ.

ಬಸವರಾಜ್‌ ಹಳ್ಳಿಖೇಡ್ (ಕೆ) ಗ್ರಾಮದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಮಂಗಳವಾರ ಸಂಜೆ ಶಾಲೆ ಮುಗಿಸಿಕೊಂಡು ಊರಿಗೆ ವಾಪಸ್‌ ಆಗುವಾಗ ಟಂಟಂ ಪಲ್ಟಿ ಆಗಿದೆ. ಪರಿಣಾಮ ಗಂಭೀರ ಗಾಯಗೊಂಡು ಬಾಲಕ ಮೃತಪಟ್ಟಿದ್ದಾನೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸಾವು

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೊಡಬೀರನಳ್ಳಿ ಬಳಿ ಬೈಕ್‌ ಹಾಗೂ ಡಿಸೇಲ್‌ ಟ್ಯಾಂಕರ್‌ ನಡುವೆ ಡಿಕ್ಕಿ ಆಗಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಿದ್ದಪ್ಪ (22) ಮೃತ ದುರ್ದೈವಿ. ಸುಲೆಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಸಿಲುಕಿ ಕಡವೆ ಮರಿ ಮೃತ್ಯು

ಯಕ್ಷಗಾನ ಕಲಾವಿದರ ಬೈಕ್‌ ಚಕ್ರಕ್ಕೆ ಕಡವೆ ಮರಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಕುಂದಾಪುರ ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಯಕ್ಷಗಾನ ಕಲಾವಿದರು ಕಿತ್ತೂರು ಕಡೆಯಿಂದ ಕೊಲ್ಲೂರಿಗೆ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ಹಾರ್ಮಣ್ಣು ಎಂಬಲ್ಲಿ ದಿಢೀರನೆ ಕಡವೆ ಮರಿ ರಸ್ತೆಗೆ ಹಾರಿದೆ. ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರವಾಗಿ ಗಾಯವಾಗಿ ಕಡವೆ ಮೃತಪಟ್ಟಿದೆ. ಘಟನೆಯಲ್ಲಿ ಸ್ಕೂಟರ್ ಜಖಂಗೊಂಡಿದ್ದು, ಕಲಾವಿದರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: IT Raid : ಅವರು ಸತ್ಯ ಹೇಳಿದ ಬಿಬಿಸಿಯವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡ್ತಾರಾ?; ಪ್ರಭಾಕರ ರೆಡ್ಡಿ ಐಟಿ ದಾಳಿಗೆ ಎಚ್‌ಡಿಕೆ ಪ್ರತಿಕ್ರಿಯೆ

ಟ್ರ್ಯಾಕ್ಟರ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಸವಾರ ಸಾವು

ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆ ಬಳಿ ಟ್ರ್ಯಾಕ್ಟರ್‌ ಟ್ರೇಲರ್‌ಗೆ ಡಿಕ್ಕಿಯಾಗಿ ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಪರಶುರಾಮ್ ವಾಲಿಕಾರ್ ಮೃತ ಬೈಕ್ ಸವಾರ. ರಸ್ತೆ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದಲ್ಲಿ ಹಿಂಬದಿ ಸವಾರ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version