Site icon Vistara News

Road Accident : ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿಯಾಗಿ ಸಾವು

lorry hit bike

ದಾವಣಗೆರೆ/ಕೊಪ್ಪಳ/ರಾಮನಗರ: ಹಾಲಿನ ಡೈರಿಯ ಲಾರಿ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ (Student Dead) ಜೀವ ಕಳೆದುಕೊಂಡಿದ್ದಾನೆ. ಎಚ್.ಕೆ.ಆರ್ ನಗರದ ನಿವಾಸಿ ಮನೋಜ್ ಕುಮಾರ್ (20) ಮೃತ ದುರ್ದೈವಿ. ದಾವಣಗೆರೆಯ ಹಳೇ ಬಾತಿ ಕೆರೆ ಬಳಿ ಅಪಘಾತ (Road Accident) ಸಂಭವಿಸಿದೆ.

ಆಯುರ್ವೇದ ಕಾಲೇಜಿನ ವಿದ್ಯಾರ್ಥಿಯಾಗಿರುವ ಮನೋಜ್‌ ಕುಮಾರ್‌ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎಗರಿ ದೂರಕ್ಕೆ ಬಿದ್ದ ಮನೋಜ್‌ ಗಂಭೀರ ಗಾಯಗೊಂಡಿದ್ದ. ಗಂಭೀರ ಗಾಯಗೊಂಡು ನರಳಾಡುತ್ತಿದ್ದ ಮನೋಜ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಉಸಿರು ಚೆಲ್ಲಿದ್ದಾನೆ.

ಮಗನ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ

ಅಪಘಾತದಲ್ಲಿ ಆಯುರ್ವೇದ ಕಾಲೇಜು ವಿದ್ಯಾರ್ಥಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಹಾಗೂ ಪಿಡಬ್ಲ್ಯೂಡಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸ್ ಹತ್ತಲೆಂದು ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದು ಮನೋಜ್ ಕುಮಾರ್ ( 20) ಮೃತಪಟ್ಟಿದ್ದರು.

ಹಂಪ್ಸ್ ಹಾಗೂ ಡಿವೈಡರ್‌ಗಳನ್ನು ಹಾಕುವಂತೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯವನ್ನು ವಹಿಸಿದ್ದರು. ಹೀಗಾಗಿ ನಮ್ಮ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: Murder case : ದೊಣ್ಣೆಯಿಂದ ಹೊಡೆದು ಹೆತ್ತವಳನ್ನೇ ಕೊಂದ ಕುಡುಕ

ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ

ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಸವಾರನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ತೊಂಡಿತೊರಿಯಪ್ಪ ದೇವಸ್ಥಾನದ ಬಳಿ ನಡೆದಿದೆ. ಬೈಕ್‌ ಸವಾರ ಕನಕಾಪುರ ಗ್ರಾಮದಿಂದ ಗಂಗಾವತಿ ಪಟ್ಟಣಕ್ಕೆ ತೆರಳುತ್ತಿದ್ದರು. ಕನಕಗಿರಿ ಮಾರ್ಗವಾಗಿ ತಾವರೆಗೆರೆ ಕಡೆಗೆ ಲಾರಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಗಂಭೀರ ಗಾಯಗೊಂಡಿರುವ ಬೈಕ್ ಸವಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೈವೇನಲ್ಲಿ ತಪ್ಪಿದ ದುರಂತ

ರಾಮನಗರದ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ದುರಂತವೊಂದು ತಪ್ಪಿದೆ. ಚಾಲಕ ನಿಯಂತ್ರಣ ತಪ್ಪಿದ್ದು ಕಂಟೇನರ್ ವಾಹನ ಸರ್ವೀಸ್ ರಸ್ತೆಗೆ ನುಗ್ಗಿದೆ. ಚನ್ನಪಟ್ಟಣ ತಾಲ್ಲೂಕಿನ ಸಂಕಲಗೆರೆ ಗೇಟ್ ಬಳಿ ಎಡಬದಿ ರಸ್ತೆಯಿಂದ ಬಲಭಾಗ ರಸ್ತೆ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version