ಬೆಳಗಾವಿ: ಕಿತ್ತೂರು ತಾಲೂಕಿನ ನಿಚ್ಛಣಿಕೆ ಗ್ರಾಮದಲ್ಲಿ ಬಸ್ ಇಲ್ಲದಿದ್ದಕ್ಕೆ ನಡೆದುಕೊಂಡು ಹೊರಟಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು (Road Accident) ಡಿಕ್ಕಿಯಾಗಿದ್ದು, ಒಬ್ಬಳು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಿತ್ತೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಅಕ್ಕವ್ವ ಹೂಲಿಕಟ್ಟಿ ಮೃತ ವಿದ್ಯಾರ್ಥಿನಿ. ಈ ಭಾಗದಲ್ಲಿ ಸಮರ್ಪಕವಾಗಿ ಬಸ್ ಸೇವೆ ಇರಲಿಲ್ಲ. ಹೀಗಾಗಿ ಶನಿವಾರ (ಡಿ.೩೧) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಭಾನುವಾರ (ಜ.೧) ಸಹ ಬಸ್ ವ್ಯವಸ್ಥೆ ಇಲ್ಲದೇ ಇದ್ದಿದ್ದಕ್ಕೆ ವಿದ್ಯಾರ್ಥಿನಿಯರು ಶಾಲೆಗೆ ನಡೆದೇ ಹೊರಟಿದ್ದರು.
ಮೃತ ಅಕ್ಕವ್ವ ೧5 ದಿನಗಳ ಹಿಂದೆಯೇ ಶಾಸಕ ಮಹಾಂತೇಶ ದೊಡ್ಡಗೌಡರಿಗೆ ಮನವಿ ಸಲ್ಲಿಸಿ, ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಕೋರಿದ್ದಳು. ಆದರೂ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತದೇಹವನ್ನಿಟ್ಟು ಪೋಷಕರ ಧರಣಿ
ಶಿವನೂರಲ್ಲಿ ವಿದ್ಯಾರ್ಥಿನಿ ಅಕ್ಕವ್ವ ಹೂಲಿಕಟ್ಟಿ ಮೃತದೇಹವನ್ನಿಟ್ಟು ಕುಟುಂಬದವರು ಮತ್ತು ಗ್ರಾಮಸ್ಥರು ಧರಣಿ ನಡೆಸಿದರು. ಸ್ಥಳಕ್ಕೆ ಮಾಜಿ ಶಾಸಕ ಡಿ.ಬಿ.ಇನಾಂದಾರ್ ಭೇಟಿ ನೀಡಿದ್ದು ಆಕ್ರೋಶಗೊಂಡಿದ್ದ ಗ್ರಾಮಸ್ಥರು, ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿದರು. ಜತೆಗೆ ಶಿವನೂರು ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆಯೂ ಒತ್ತಾಯಿಸಿದರು. ಘಟನೆ ಖಂಡಿಸಿ ವಿದ್ಯಾರ್ಥಿನಿ ಭಾವಚಿತ್ರ ಹಿಡಿದು ಗ್ರಾಮಸ್ಥರು ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ರಸ್ತೆ ತಡೆದರು.
ಇದನ್ನೂ ಓದಿ | Rishabh Pant | ಚೇತರಿಕೆ ಕಾಣುತ್ತಿರುವ ಪಂತ್ ಭೇಟಿಯಾಗಲು ಆಸ್ಪತ್ರೆಗೆ ಬರಬೇಡಿ; ಶ್ಯಾಮ್ ಶರ್ಮಾ ಮನವಿ