ದಾವಣಗೆರೆ: ಅವಳು ಮೂರು ವರ್ಷದ ಪುಟ್ಟ ಬಾಲಕಿ. ಜಗತ್ತಿಗೆ ಇನ್ನೂ ತೆರೆದುಕೊಳ್ಳುತ್ತಿದ್ದ ಕಂದಮ್ಮ. ಮುದ್ದು ಮುದ್ದು ಮಾತುಗಳನ್ನು ಆಡಿಕೊಂಡು ಮನೆಯವರನ್ನು ರಂಜಿಸಿಕೊಂಡಿದ್ದವಳು ಬುಧವಾರ ಇಹಲೋಕ ತ್ಯಜಿಸಿದ್ದಾಳೆ. ಅಂಗನವಾಡಿ ಮುಗಿಸಿ ತನ್ನ ಅಜ್ಜಿಯ ಕೈ ಹಿಡಿದುಕೊಂಡು ರಸ್ತೆ ಮೇಲೆ ನಡೆದುಕೊಂಡು ಬರುತ್ತಿದ್ದವಳ ಮೇಲೆ ಟಿಪ್ಪರ್ ಲಾರಿಯೊಂದು (Road Accident) ಹರಿದು, ಆಕೆಯ ತಲೆಯನ್ನೇ ಛಿದ್ರ ಮಾಡಿಬಿಟ್ಟಿದೆ.
ಈ ಘೋರ ದುರಂತಕ್ಕೆ ಸಾಕ್ಷಿಯಾಗಿ ಮೃತಪಟ್ಟಿರುವುದು ಮೂರು ವರ್ಷದ ಚರಸ್ವಿ. ಈಕೆ ಕುಂದುವಾಡ ಗ್ರಾಮದ ಗಣೇಶ್ ಎಂಬುವವರ ಪುತ್ರಿಯಾಗಿದ್ದಾಳೆ. ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಘಟನೆ ನಡೆದಿದೆ.
ಈಕೆಯನ್ನು ಅಂಗನವಾಡಿಗೆ ಸೇರಿಸಲಾಗಿತ್ತು. ಅಂಗನವಾಡಿ ಮುಗಿಸಿ ಅಜ್ಜಿ ಜತೆ ಹೊರಟಿದ್ದಳು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿಯು ಬಾಲಕಿಗೆ ಗುದ್ದಿದೆ. ಕೆಳಗೆ ಬಿದ್ದ ಚರಸ್ವಿ ತಲೆ ಮೇಲೆ ಹರಿದ ಪರಿಣಾಮ ತಲೆ ಒಡೆದುಹೋಗಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.
ಇದನ್ನೂ ಓದಿ: Yoga Day 2023: ಸೀರೆ ಉಟ್ಟು ಯೋಗ ಮಾಡಿದ ಮಹಿಳೆಯರು; ಕಲರ್ಫುಲ್ ವಿಡಿಯೊ ವೈರಲ್
ಅಜಾಗರೂಕತೆಯ ಲಾರಿ ಚಾಲನೆಯೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಆಕ್ರೋಶವನ್ನು ಹೊರ ಹಾಕಿದ್ದಾರೆ. ಲಾರಿ ಚಾಲಕ, ಮಾಲೀಕನ ಬಂಧನಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ತವರಿನಲ್ಲಿ ಎಂ.ಸ್ಯಾಡ್ ಟಿಪ್ಪರ್ ಲಾರಿಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಬೇಕು. ಇದಕ್ಕೊಂದು ಸೂಕ್ತ ನಿಯಾವಳಿಯನ್ನು ತರಬೇಕು. ಈಗ ಹೋದ ಪುಟ್ಟ ಕಂದಮ್ಮಳ ಜೀವವನ್ನು ಯಾರು ಕೊಡಲು ಸಾಧ್ಯ? ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.