Site icon Vistara News

Road Accident: ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಬಸ್‌; ಇಬ್ಬರು ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

Two killed, another critically injured in collision between Tata Ace and bus

Two killed, another critically injured in collision between Tata Ace and bus

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಟಾಟಾ ಏಸ್‌ಗೆ ಬಸ್‌ವೊಂದು ಡಿಕ್ಕಿ (Road Accident) ಹೊಡೆದಿದೆ. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರ ಗಾಯಗೊಂಡಿದ್ದಾರೆ. ಶಂಕರ್ (34), ವಿಲ್ಸನ್‌ ಗಲ್ಬಟ್ (32) ಮೃತ ದುರ್ದೈವಿಗಳು.

ಮೃತರು ಬೆಂಗಳೂರಿನ ಎಚ್ಎಎಲ್ ನಿವಾಸಿಗಳಾಗಿದ್ದು, ಶ್ರೀವಾಸ್ (35) ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಮೂವರು ಪೈಂಟರ್ಸ್‌ಗಳಾಗಿದ್ದು, ತುಮಕೂರಿನಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಲ್ಲಿ ತುಂಬಿದ್ದ ಟಿಪ್ಪರ್‌ ಪಲ್ಟಿ; ತಪ್ಪಿದ ದುರಂತ

ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿ ಭಾರಿ ಅನಾಹುತ ತಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಹೊರವಲಯ ರಾಷ್ಟ್ರೀಯ ಹೆದ್ದಾರಿ ಚಿಕ್ಕಸಣ್ಣೆ ಗೇಟ್ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಲ್ಲಿ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಪಲ್ಟಿಯಾಗಿದೆ.

ಹೆದ್ದಾರಿಗೆ ಒಮಿನಿ ಕಾರು ತಿರುವು ಪಡೆದುಕೊಳ್ಳುವಾಗ ಅತಿವೇಗದಲ್ಲಿ ಬಂದ ಟಿಪ್ಪರ್ ಲಾರಿಯೊಂದು ಕಾರು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ‌. ಈ ವೇಳೆ ಟಿಪ್ಪರ್ ಹಾಗೂ ಕಾರು ಜಖಂ ಆಗಿದ್ದು, ಇಬ್ಬರು ಚಾಲಕರು ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಪಘಾತದಲ್ಲಿ ಜಲ್ಲಿ ಕಲ್ಲು ಎಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಸ್ಥಳಕ್ಕೆ ಕೆಂಪೇಗೌಡ ಏರ್‌ಪೋರ್ಟ್‌ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಬಿದ್ದಿರುವ ಟಿಪ್ಪರ್ ಹಾಗೂ ಜಲ್ಲಿ ಕಲ್ಲಿಅನ್ನು ತೆರವು ಮಾಡಲು ಸಂಚಾರಿ ಪೊಲೀಸರು ಕ್ರಮ ವಹಿಸಿದ್ದಾರೆ.

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ಕಾರು ಹಾಗೂ ಬೈಕ್ ನಡುವೆ ಭಾರಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ದುರ್ಘಟನೆ ಚಿತ್ರದುರ್ಗದಲ್ಲಿ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಸಮೀಪ ನಡೆದಿದೆ. ಶಿವಗಂಗಾ ಗ್ರಾಮದ 23 ವರ್ಷದ ಆಕಾಶ್ ಮೃತ ದುರ್ದೈವಿ. ಹೊಳಲ್ಕೆರೆ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್, ತಡರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಟಿ.ನುಲೇನೂರು ಗೇಟ್ ಸಮೀಪ ಇರುವ ಢಾಬಾಗೆ ಊಟಕ್ಕೆ ತೆರಳಿದ್ದ ಆಕಾಶ್ ಚಿತ್ರಹಳ್ಳಿ ಗೇಟ್ ದಾಟುವ ವೇಳೆ ಚಿತ್ರದುರ್ಗದ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರು ಹಾಗೂ ಬೈಕ್ ಸಂಪೂರ್ಣ ಜಖಂ ಆಗಿವೆ. ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕಾರು ಅಪಘಾತದಲ್ಲಿ ದಂಪತಿ ಬಲಿ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಕ್ರಾಸ್‌ನಲ್ಲಿ ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿದ್ದ ಇಟಿಯೂಸ್ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಶಫಿ (55), ಶಾಮಾ (50) ಮೃತ ದುರ್ದೈವಿಗಳಾಗಿದ್ದಾರೆ.

ಶಫಿ ಆಂಧ್ರಪ್ರದೇಶದ ಮದನಪಲ್ಲಿ ಗ್ರಾಮದ ಗುತ್ತಿಗೆದಾರರೆಂದು ತಿಳಿದು ಬಂದಿದೆ. ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಗಳನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ವಾಪಸ್ಸು ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಇನ್ನು ಕ್ರೇನ್ ಸಹಾಯದೊಂದಿದೆ ಕಾರು ಮೇಲತ್ತಲಾಗಿದ್ದು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಮೃತ ದೇಹಗಳನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Kr pura to Whitefield Metro: ಕೆ.ಆರ್. ಪುರಂನಿಂದ ವೈಟ್ ಫೀಲ್ಡ್ ಮೆಟ್ರೋ ಓಡಾಟಕ್ಕೆ ಕೌಂಟ್‌ಡೌನ್‌ ಆರಂಭ; ಮಾರ್ಚ್‌ 25ಕ್ಕೆ ಡೇಟ್‌ ಫಿಕ್ಸ್‌!

ಟಿಪ್ಪರ್‌ಗೆ ಕಾರು ಡಿಕ್ಕಿ

ರಾಮನಗರ ಬೈಪಾಸ್‌ನ ಸಂಘ ಬಸವನ ದೊಡ್ಡಿ ಬಳಿ ಮರಳು ತುಂಬಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಲಾರಿ ಅರ್ಧಕ್ಕೆ ವಾಲಿದ್ದು, ಸೇತುವೆ ಮೇಲಿಂದ ಕೆಳಗೆ ಉರುಳಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version