Site icon Vistara News

Road Accident : ಸ್ಕೂಟರ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು; ಒಣಗಿದ ಮರ ಬಿದ್ದು ನಾಲ್ವರು ಗಂಭೀರ

Accident case in Bengaluru

ಮೈಸೂರು/ಬೆಂಗಳೂರು: ಮೈಸೂರಿನ ತಿ.ನರಸೀಪುರ ರಸ್ತೆಯ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಹನೂರು ತಾಲೂಕಿನ ಬಿಡಿ ವರದಿಗಾರ ಮೃತಪಟ್ಟಿದ್ದಾರೆ. ಹನೂರಿನ ವಿನೋದ್ (38) ಮೃತ ದುರ್ದೈವಿ.

ವಿನೋದ್‌ ಉದಯವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿದ್ದರು. ಸ್ಕೂಟರ್‌ನಲ್ಲಿ ಬರುತ್ತಿದ್ದ ವಿನೋದ್‌, ರಿಂಗ್ ರೋಡ್‌ನಿಂದ ನಗರದ ಕಡೆ ತಿರುವು ಪಡೆಯುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿನೋದ್‌ರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ, ಚಿಕಿತ್ಸೆ ಫಲಿಸದೆ ವಿನೋದ್‌ ಮೃತಪಟ್ಟಿದ್ದಾರೆ. ಈ ಸಂಬಂಧ ಸಿದ್ದಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಒಣಗಿದ ಮರ

ಬೆಂಗಳೂರಿನ ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಒಣಗಿದ ಮರ ಬಿದ್ದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಚಲಿಸುತ್ತಿದ್ದ ಆಟೋ ಮೇಲೆ ಮರದ ತುಂಡು ರಭಸವಾಗಿ ಬಿದ್ದಿದೆ. ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡರು. ದೊಡ್ಡ ಗಾತ್ರದ ಮರದ ತುಂಡು ಬಿದ್ದಿದ್ದರಿಂದ ಆಟೋ ಜಖಂಗೊಂಡಿತ್ತು. ಆಟೋದಲ್ಲಿ ಸಿಲುಕಿ ಒದ್ದಾಡುತ್ತಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿದರು. ರಕ್ತದ ಮಡುವಿನಲ್ಲಿದ್ದವರನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದರು.

ಏರ್‌ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ

ಏರ್ ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಒಟ್ಟಿಗೆ ಹತ್ತು ವಾಹನಗಳು ಜಖಂಗೊಂಡಿವೆ. ಓಮ್ನಿ ಕಾರೊಂದು ಹೈವೆಯಲ್ಲಿ ನಿಧಾನವಾಗಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇತರೆ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಅತಿ ವೇಗದ ಚಾಲನೆಯೇ ಉಳಿದ ಕಾರುಗಳ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಒಟ್ಟು 10 ಕಾರುಗಳು ಜಖಂಗೊಂಡಿತ್ತು. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ವಂಟಮೂರಿ ಬಳಿಕ ರಾಣೆಬೆನ್ನೂರಿನಲ್ಲಿ ಲವ್‌ ಕೇಸ್‌; ಯುವಕನ ಮನೆಯವರಿಗೆ ಹಲ್ಲೆ

ಹಾವೇರಿ: ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಯುವಕ-ಯುವತಿ ಪ್ರೇಮಿಸಿ ನಾಪತ್ತೆಯಾದ (Lovers absconding) ಪ್ರಕರಣ ತಾರಕಕ್ಕೇರಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ (Naked Parade) ಮಾಡಿದ ಘಟನೆ ಹಸಿರಾಗಿರುವಂತೆಯೇ ಹಾವೇರಿ ಜಿಲ್ಲೆ (Haveri News ರಾಣೆಬೆನ್ನೂರಿನಲ್ಲೂ ಇದೇ ಮಾದರಿಯ ಘಟನೆ ನಡೆದಿದೆ. ಇಲ್ಲಿ ಯುವಕ-ಯುವತಿ ಪ್ರೇಮಿತಿ ಓಡಿಹೋಗಿದ್ದು (Love case), ಯುವತಿ ಕಡೆಯವರು ಬಂದು ಯುವಕನ ಮನೆಯಲ್ಲಿ ದಾಂಧಲೆ ನಡೆಸಿ (attack on youngsters house), ಹಲ್ಲೆ ಮಾಡಿದ್ದಲ್ಲದೆ ಮಾವನ ಮೇಲೆ ಅಟ್ಯಾಕ್‌ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರಮುಖವಾಗಿ ಯುವಕನ ಮಾವ ಪ್ರಶಾಂತ್‌ ಮೇಲೆ ಹಲ್ಲೆ ನಡೆದಿದೆ. ಅವರನ್ನು ವಾಹನದಲ್ಲಿ ಕರೆದೊಯ್ದು ಹಲವು ಕಡೆ ನಿಲ್ಲಿಸಿ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಚಳಗೇರಿ ಗ್ರಾಮದ ಯುವತಿ ಸಂಗೀತಾ, ಮುದೇನೂರು ಗ್ರಾಮದ ಪ್ರಕಾಶ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಇದಕ್ಕೆ ಎರಡೂ ಕಡೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಇವರಿಬ್ಬರೂ ಶನಿವಾರ ಯಾರಿಗೂ ಹೇಳದೆ ಊರು ಬಿಟ್ಟು ಓಡಿ ಹೋಗಿದ್ದಾರೆ. ಆದರೆ, ಇದರಲ್ಲಿ ಹುಡುಗನ ಮನೆಯವರ ಕೈವಾಡವೂ ಇದೆ ಎಂದು ಶಂಕಿಸಿದ ಹುಡುಗಿ ಮನೆಯವರು ಸಿಟ್ಟಿಗೆದ್ದಿದ್ದಾರೆ. ಯುವತಿಯನ್ನು ಹುಡುಕಿ ಕೊಡಿ ಎಂದು ಗಲಾಟೆ ಮಾಡಿದ ಯುವತಿ ಕಡೆಯವರು ದಾಂಧಲೆ ಎಬ್ಬಿಸಿದ್ದಾರೆ.

ಯುವಕನ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಹುಡುಗಿ ಕಡೆಯವರು ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಯುವಕನ ಕುಟುಂಬವನ್ನ ಗಾಡಿಯಲ್ಲಿ ತಂದು ರಾಣೇಬೆನ್ನೂರಿನಲ್ಲಿ ಬಿಟ್ಟು ಹೋದ ಹುಡುಗಿ ಕಡೆಯವರು ಯುವಕನ ಮಾವ ಪ್ರಶಾಂತ್ ಎನ್ನುವವರನ್ನ‌ ಅರೆ ಬೆತ್ತಲೆ ಮಾಡಿ ಥಳಿಸಿದ್ದಾರೆಂದು ಆರೋಪ ಮಾಡಲಾಗಿದೆ.

ಇದೀಗ ಹುಡುಗನ ಕಡೆಯವರು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ನಡುವೆ, ಪ್ರಶಾಂತ್‌ ಮತ್ತು ಹುಡುಗಿ ಕಡೆಯವರಿಗೆ ಯಾವುದೋ ಸಾಲದ ವಿಚಾರದಲ್ಲೂ ಜಗಳ ಆಗಿದ್ದು, ಅದಕ್ಕೆ ಸಂಬಂಧಿಸಿಯೂ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಪ್ರೀತಿ ಮತ್ತು ಪ್ರೇಮದ ವಿಚಾರದಲ್ಲಿ ಈಗ ತುಂಬ ದೊಡ್ಡ ಮಟ್ಟದ ಗಲಾಟೆಗಳಾಗುತ್ತಿವೆ. ವಂಟಮೂರಿಯಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಹಲವರನ್ನು ಬಂಧಿಸಿದ್ದರೂ ಜನರು ತಮ್ಮ ವೈಯಕ್ತಿಕ ವಿಚಾರ ಬಂದಾಗ ಅತ್ಯಂತ ಅಮಾನವೀಯ ದಾರಿಗಳ ಮೂಲಕವೇ ಸೇಡು ತೀರಿಸಿಕೊಳ್ಳಲು ಕಾಯುತ್ತಾರೆ.

ಹಾಲಿ ಪ್ರಕರಣದಲ್ಲಿ ಹುಡುಗ-ಹುಡುಗಿ ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಹುಡುಗಿಯ ಕಡೆಯವರು ಅವರಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಒಂದು ವೇಳೆ ಸಿಕ್ಕಿಬಿದ್ದರೆ ಹುಡುಗನ ಮೇಲೆ ಹಲ್ಲೆ ನಡೆಸುವ ಸಾಧ್ಯತೆಗಳೂ ಇವೆ. ವಂಟಮೂರಿ ಪ್ರಕರಣದಲ್ಲಿ ನಾಪತ್ತೆಯಾದ ಹುಡುಗ ಹುಡುಗಿ ಮೂರು ದಿನಗಳ ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮುಂದೆ ಬಂದು ರಕ್ಷಣೆ ಕೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version