ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ಕಿಲ್ಲರ್‌ಗಳಾಗುತ್ತಿದ್ದರೆ, ಇತ್ತ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡಾ ಅದೇ ದಾರಿಯಲ್ಲಿವೆ. ಸಂಗೊಳ್ಳಿ ರಾಯಣ್ಣ ಬ್ರಿಡ್ಜ್ ಬಳಿ ಭಾನುವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ (Road accident) ದ್ವಿಚಕ್ರ ವಾಹನ ಸವಾರರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದು ಲತಾ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊದಲು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ ಬಳಿಕ ಲತಾ ಮೇಲೆ ಹರಿದಿದೆ. ತಲೆ ಮೇಲೆಯೇ ಬಸ್ ಹರಿದು, ಮೆದುಳು ರಸ್ತೆಗೆ ಬಿದ್ದಿತ್ತು. ದ್ವಿಚಕ್ರ ವಾಹನದಲ್ಲಿ ಲತಾ ಪತಿಯು ಜತೆಗೆ ಇದ್ದರು, ಆದರೆ ಅವರು ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಇಳಿಯುವಾಗ ವೇಗವಾಗಿ ಬಂದ ಬಸ್‌ನಿಂದ ಅಪಘಾತ ಸಂಭವಿಸಿದೆ. ಅಪಘಾತವಾಗಿ ಅರ್ಧ ಗಂಟೆ ಕಳೆದರೂ ಆಂಬ್ಯುಲೆನ್ಸ್ ಬಂದಿಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಲತಾ ಸರ್ಕಾರಿ ಗೆಜೆಟೆಡ್ ಅಧಿಕಾರಿ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Road Accident : ಅತಿ ವೇಗ ತಂದ ಆಪತ್ತು; ಕ್ಯಾಂಟರ್ ಡಿಕ್ಕಿಯಾಗಿ ಹೋಂ ಗಾರ್ಡ್ ಸೇರಿ ಇಬ್ಬರ ದುರ್ಮರಣ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಆಟೋದಲ್ಲಿ ರವಾನೆ ಮಾಡಲಾಗಿದೆ. ಹೀಗಾಗಿ ಕುಟುಂಬಸ್ಥರು ಕಿಡಿಕಾರಿದರು. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆಎಸ್‌ಆರ್‌ಟಿಸಿ ಡ್ರೈವರ್ ಹಾಗೂ ಕಂಡಕ್ಟರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಬಸ್ ಹರಿದು ಬೈಕ್ ಸವಾರ ಸಾವು
ಬೆಂಗಳೂರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕ್ಲಿಲರ್ ಆದರೆ ಇತ್ತ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ವಾಯವ್ಯ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮಂಜುನಾಥ ಬಂಡಿಯವರ (44) ಮೃತ ದುರ್ದೈವಿ.
ಮುಂಡರಗಿಯಿಂದ ಶಿರಹಟ್ಟಿಗೆ ಬಸ್ ಹೊರಟಿತ್ತು. ಮಂಜುನಾಥ ಕೆ.ಇ.ಬಿ ಬಳಿ ನೀರು ತುಂಬಿಕೊಂಡು ಬೈಕ್‌ನಲ್ಲಿ ಬರುತ್ತಿದ್ದರು. ಓವರ್ ಟೇಕ್ ವೇಳೆ ಬಸ್‌ಗೆ ತಾಗಿದ್ದು, ಚಕ್ರದಡಿ ಬಿದ್ದಿದ್ದಾರೆ. ಬಸ್‌ನ ಹಿಂದಿನ ಚಕ್ರಕ್ಕೆ ಸಿಲುಕಿ ಮಂಜುನಾಥ ಉಸಿರು ಚೆಲ್ಲಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ನಿಯಂತ್ರಣ ತಪ್ಪಿ 30 ಅಡಿ ಆಳಕ್ಕೆ ಬಿದ್ದ ಕಾರು
ಮಂಡ್ಯ ಜಿಲ್ಲೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಇಲ್ಲಿನ ಮಾಚಹಳ್ಳಿ ಗ್ರಾಮದಲ್ಲಿ ವಿಸಿ ನಾಲೆಗೆ ಕ್ರೇಟಾ ಕಾರೊಂದು ಬಿದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಮಕ್ಕಳು, ತಂದೆ-ತಾಯಿ ಅಪಾಯದಿಂದ ಪಾರಾಗಿದ್ದಾರೆ. ಈ ನಾಲ್ವರು ಪಾಂಡವಪುರದಿಂದ ಬೆಂಗಳೂರಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಕಾರು ನಿಯಂತ್ರಣ ತಪ್ಪಿ, ಸುಮಾರು 30 ಅಡಿ ಆಳದಲ್ಲಿ ಬಿದ್ದಿದೆ. ಪಾವಡ ಸದೃಶ ರೀತಿಯಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಶಿವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ. ಶಿವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ