Site icon Vistara News

Road Accident : ಯಮನಂತೆ ಬಂದ ಟಿಪ್ಪರ್‌ಗೆ ಮಹಿಳೆ ಬಲಿ! ಸವಾರ ಗಂಭೀರ

Road Accident

ಬಾಗಲಕೊಟೆ: ಇಲ್ಲಿನ ಸೀಮಿಕೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬೈಕ್‌ ಹಿಂಬದಿಗೆ ಟಿಪ್ಪರ್ ವಾಹನ (Road Accident) ಡಿಕ್ಕಿಯಾಗಿದೆ. ಸ್ಥಳದಲ್ಲೇ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ತಬಶುಮ್ ಅತ್ತಾರ್ ಮೃತ ದುರ್ದೈವಿ.

ಗಲಗಲಿ ಮೂಲದ ತಬಶುಮ್ ಅತ್ತಾರ್‌ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಿಂದ ನವನಗರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಗದ್ದನಕೇರಿ ಗ್ರಾಮದಿಂದ ಬರುತ್ತಿದ್ದ ಟಿಪ್ಪರ್‌ ವಾಹನ ಒಮ್ಮೆಲೆ ಬೈಕ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ತಬಶುಮ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್‌ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಸ್ಥಳದಲ್ಲಿ ಮೃತ ತಬಶುಬ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೈಕ್ ವ್ಹೀಲಿಂಗ್ ಮಾಡಿದ ಯುವಕನ ಸೆರೆ

ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನ ಬಂಧಿಸಿ ಸೈಲೆನ್ಸರ್‌ನನ್ನು ಪೊಲೀಸರು ಧ್ವಂಸ ಮಾಡಿದ್ದಾರೆ. ವಸೀಂ (19) ಎಂಬಾತನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ತಾಲೂಕಿನ ಅಗಲಕೋಟೆ ಗ್ರಾಮದ ವಸೀಂ, ಕರ್ಕಶ ಶಬ್ಧ ಬರುವ ರೀತಿಯಲ್ಲಿ ಪಟ್ಟಣದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ಹೀಗಾಗಿ ಆತನಿಂದಲೇ ಬೈಕ್ ಸೈಲೆನ್ಸರ್ ಬಿಚ್ಚಿಸಿ ಕಲ್ಲಿನಿಂದ ಜಜ್ಜಿಸಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬೈಕ್ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: Murder Case : ಕೇವಲ 15 ನಿಮಿಷಕ್ಕೆ ನಾಲ್ವರನ್ನು ಬಲಿ ಪಡೆದ ಕೊಲೆಗಡುಕ

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಾಹನ ಪಲ್ಟಿ; ಯುವಕ ಸಾವು,10 ಮಂದಿಗೆ ಗಾಯ

ಮೈಸೂರು: ದೀಪಾವಳಿ ಜಾತ್ರೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಗೂಡ್ಸ್‌ ವಾಹನವು (Road Accident) ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಯುವಕನೊರ್ವ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದರ್ಶನ್ (20) ಮೃತ ದುರ್ದೈವಿ.

ಮೈಸೂರು- ತಿ.ನರಸೀಪುರ ಮುಖ್ಯರಸ್ತೆಯ ಮೇಗಳಾಪುರ ಬಳಿ ಈ ದುರ್ಘಟನೆ ನಡೆದಿದೆ. ದರ್ಶನ್‌ ಹಾಗೂ ಆತನ ಸಹಚರರು ಮಲೆ ಮಹದೇಶ್ವರ ಬೆಟ್ಟಕ್ಕೆ ಗೂಡ್ಸ್‌ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವು ರಸ್ತೆ ಬದಿಯಲ್ಲಿದ್ದ ತಡೆಗೋಡೆಯಿಂದ ಹಾರಿ ಕೆಳಗೆ ಬಿದ್ದಿದೆ.

ಪರಿಣಾಮ ದರ್ಶನ್‌ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸುಮಾರು 10 ಯುವಕರಿಗೆ ಗಾಯವಾಗಿದೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಾಕಿಂಗ್‌ ಹೋಗಿದ್ದ ಅಜ್ಜಿ-ಮೊಮ್ಮಗಳಿಗೆ ಕಾರು ಡಿಕ್ಕಿ

ಬೆಂಗಳೂರಿನ ಕಲ್ಯಾಣ ನಗರದ ಚಳ್ಳಿಕೆರೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಜ್ಜಿ ಮತ್ತು ಮೊಮ್ಮಗಳಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಶೀಲಾ (60) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊಮ್ಮಗಳಿಗೆ ಸಣ್ಣಪುಟ್ಟ ಗಾಯವಾಗಿದೆ.

ಅತಿವೇಗವಾಗಿ ಬಂದ ಕಾರು ಚಾಲಕ ಕುಮಾರ್ ಎಂಬಾತ ಮೊದಲಿಗೆ ಇಬ್ಬರಿಗೂ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಡಿಕ್ಕಿಯಾಗಿ ಕಾಂಪೌಂಡ್‌ಗೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version