ಬೆಳಗಾವಿ/ಬೆಂಗಳೂರು: ಅವರೆಲ್ಲರೂ ಅವರವರ ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತಿದ್ದರು. ಮುಂದಿನ ಕೆಲಸದ ತರಾತುರಿ ಅವರಲ್ಲಿತ್ತು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಆ ಐದು ನಿಮಿಷ ಅವರ ಹಣೆಬರಹವನ್ನೇ ಬದಲಾಯಿಸಿ ಮೃತ್ಯುಕೂಪಕ್ಕೆ ತಳ್ಳಿ ಬಿಟ್ಟಿತ್ತು. ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತವು (Road Accident) ಸಾವು-ನೋವಿಗೆ ಕಾರಣವಾಗಿದ್ದು, ಆ ಕ್ಷಣವೆಲ್ಲವೂ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ.
ಬೆಳಗಾವಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯಾರದ್ದು ಸರಿ-ತಪ್ಪು ಎಂಬ ಚರ್ಚೆಗಿಂತ, ವಿಧಿಯಾಟವನ್ನೇ ಜನರು ಶಪಿಸಿದರು. ವೃದ್ಧರೊಬ್ಬರು ರಸ್ತೆ ಬದಿಯಲ್ಲಿ ಭುಜದ ಮೇಲೆ ದಿನಸಿ ಹೊತ್ತು ಹೊರಟ್ಟಿದ್ದರು. ಈ ವೇಳೆ ಎದುರಿಗೆ ಬೈಕ್‌ವೊಂದರಲ್ಲಿ ಸವಾರರಿಬ್ಬರು ಪ್ರಯಾಣಿಸುತ್ತಿದ್ದರು. ಅನಾಚಕ್ ಆಗಿ ಹಿಂಬದಿ ಕುಳಿತ್ತಿದ್ದ ಮಹಿಳೆ ಕೈ, ವೃದ್ಧನಿಗೆ ಟಚ್ ಆಗಿತ್ತು. ಅಷ್ಟೇ ಸವಾರನ ನಿಯಂತ್ರಣ ತಪ್ಪಿ, ಒಮ್ಮೆಲೆ ಇಬ್ಬರು ರಸ್ತೆಗೆ ಬಿದ್ದಿದ್ದರು. ಬೈಕ್ ಹಿಂದೆಯೇ ಬರುತ್ತಿದ್ದ ಸಾರಿಗೆ ಬಸ್‌ನ ಚಕ್ರದಡಿ ಸಿಲುಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದರೆ, ಮತ್ತೊಬ್ಬ ಸವಾರ ಪವಾಡ ಸದೃಶ್ಯ ಎಂಬಂತೆ ಬದುಕುಳಿದಿದ್ದರು.
ಧಾರವಾಡ ಮೂಲದ ವಿದ್ಯಾಶ್ರೀ (32) ವಿಧಿಯಾಟಕ್ಕೆ ಬಲಿಯಾಗಿದ್ದಳು. ಸಂಬಂಧಿಕರ ಮನೆಗೆ ಹೋಗಬೇಕಾದವಳು ಸಾವಿನ ಮನೆ ಸೇರಿದ್ದಳು. ಎರಡು ದಿನದ ಹಿಂದೆ ನಡೆದಿದ್ದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿತ್ತು.
ಅಡ್ಡಾದಿಡ್ಡಿಯಾಗಿ ಬಂದು ಗುದ್ದಿದ ಗಾಡಿ
ಬೆಂಗಳೂರಿನ ವೈಟ್ ಫೀಲ್ಡ್ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತ ಮೈ ಜುಮ್ ಎನ್ನಿಸುವಂತೆ ಮಾಡುತ್ತೆ. ರಸ್ತೆ ಬದಿ ಬೈಕ್ ಸವಾರನೊಬ್ಬ ತನ್ನ ಗೆಳೆಯನ ಜತೆಗೆ ಮಾತಾನಾಡುತ್ತಾ ನಿಂತಿದ್ದ. ಮತ್ತೊಂದೆಡೆ ಅವರದ್ದೇ ದಾರಿಯಲ್ಲಿ ಪಾದಚಾರಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ನೋಡನೋಡುತ್ತಿದ್ದಂತೆ ಅಡ್ಡದಿಡ್ಡಿಯಾಗಿ ಬಂದಿದ್ದ ಟಾಟಾ ಏಸ್ ಗಾಡಿಯೊಂದು ಡಿಕ್ಕಿ ಹೊಡೆದಿತ್ತು.
ಡಿಕ್ಕಿ ರಭಸಕ್ಕೆ ಬೈಕ್ ಮೇಲೆ ಕುಳಿತಿದ್ದವರು ಹಾಗೂ ಪಾದಚಾರಿ ಗಾಳಿಯಲ್ಲಿ ಹಾರಿ ಬಿದಿದ್ದರು. ಅಪಘಾತದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ವೈಟ್ ಫೀಲ್ಡ್‌ನ ಹಗದೂರು ಮುಖ್ಯರಸ್ತೆಯಲ್ಲಿ ನಡೆದ ಅಪಘಾತದ ಎಕ್ಸ್ ಕ್ಲ್ಯೂಸಿವ್ ದೃಶ್ಯ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಪಾದಚಾರಿಗೆ ಕಾಲು ಮುರಿದಿದ್ದು, ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದೆ. ಇಬ್ಬರ ಸ್ಥಿತಿಯು ಚಿಂತಾಜನಕವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಎರಡು ಅಪಘಾತಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ