Site icon Vistara News

Modi in Karnataka: ಮೋದಿ ಶೋಗಾಗಿ ರೋಡ್ ಬಂದ್; ಸಿಕ್ಕಿಹಾಕಿಕೊಂಡ ರೋಗಿಗಳು, ಮದುಮಕ್ಕಳು: ಭುಗಿಲೆದ್ದ ಜನಾಕ್ರೋಶ

Road bandh for Modi road show Trapped patients and brides and children Public outcry erupts Modi in Karnataka updates

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ಹಲವು ಕಡೆ ರಸ್ತೆ ಸಂಚಾರವನ್ನು ಬ್ಲಾಕ್‌ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿಯೇ ಇದೆ. ಇನ್ನು ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Modi in Karnataka) ಸಹಿತ ಕೇಂದ್ರ ಸಚಿವ ಸಂಪುಟವೇ ಶನಿವಾರ ರಾಜ್ಯದಲ್ಲಿ ಬೀಡುಬಿಟ್ಟಿದೆ. ಈ ನಡುವೆ ರಾಜ್ಯಕ್ಕೆ ಬೆಳಗ್ಗೆಯೇ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೀದರ್‌, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ್ದು, ಸಂಜೆ 5.30ಕ್ಕೆ ಬೆಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್‌ ಶೋ (BJP Road Show) ನಡೆಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಪ್ರಧಾನಿ ಭೇಟಿಗಾಗಿ ರಾಜಧಾನಿ ಬೆಂಗಳೂರಿನ ಬಹುತೇಕ ರಸ್ತೆಗಳು ಬೆಳಗ್ಗೆಯೇ ಬ್ಲಾಕ್‌ ಆಗಿದ್ದವು. ಇದರಿಂದ ರೋಗಿಗಳು, ಮದುಮಕ್ಕಳು ಸೇರಿದಂತೆ ಸಾರ್ವಜನಿಕರು ರೋಸಿ ಹೋಗಿದ್ದರು. ನಿಮ್ಮ ಚುನಾವಣಾ ಪ್ರಚಾರಕ್ಕಾಗಿ ನಮ್ಮನ್ನೇಕೆ ಸತಾಯಿಸುತ್ತೀರಿ ಎಂಬ ಆಕ್ರೋಶದ ಮಾತುಗಳೂ ಕೇಳಿಬಂದವು.

ಘಟನೆ 1 – ಆಂಬ್ಯುಲೆನ್ಸ್‌ ತಡೆದ ಪೊಲೀಸರು

ಈಸ್ಟ್ ವೆಸ್ಟ್ ಜಂಕ್ಷನ್ ಬಳಿ ಸಂಚಾರ ನಿರ್ಬಂಧವನ್ನು ಹೇರಲಾಗಿತ್ತು. ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಅಲ್ಲಿಗೆ ಬಂದ ವಾಹನ ಸವಾರರಿಗೆ ಪೊಲೀಸರು ಸೂಚಿಸುತ್ತಿದ್ದರು. ರಸ್ತೆ ಮಧ್ಯೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿತ್ತು. ಇದೇ ವೇಳೆ ಅಲ್ಲಿಗೆ ಆಂಬ್ಯುಲೆನ್ಸ್ ಒಂದು ಆಗಮಿಸಿದ್ದು, ಪೊಲೀಸರು ತಡೆದಿದ್ದಾರೆ. ಅದಕ್ಕೆ ದಾರಿ ಬಿಡದೆ ಅನ್ಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ.

ಈಸ್ಟ್ ವೆಸ್ಟ್ ಜಂಕ್ಷನ್ ಬಳಿ ಆಂಬ್ಯುಲೆನ್ಸ್‌ ತಡೆದಿದ್ದ ಪೊಲೀಸರು.

ಆಂಬ್ಯುಲೆನ್ಸ್‌ ಪರದಾಟದ ವಿಡಿಯೊ ಇಲ್ಲಿದೆ

ಆಗ ಆಂಬ್ಯಲೆನ್ಸ್‌ನಲ್ಲಿ ರೋಗಿ ಇರುವುದಾಗಿ ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ತೆರಳಲು ಪೊಲೀಸರು ಬ್ಯಾರಿಕೇಡ್ ತೆಗೆದು ಅನುವು ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ ಹಿಂಬದಿಯಲ್ಲಿಯೇ ನುಗ್ಗಲು ಕೆಲವು ಬೈಕ್ ಸವಾರರು ಹೊರಟರು. ಆಗ ಅವರನ್ನು ಪೊಲೀಸರು ತಡೆದರು. ಇದಕ್ಕೆ ಪೊಲೀಸರ ವಿರುದ್ಧ ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದೇ ಮಾರ್ಗದಲ್ಲಿ ತೆರಳಲು ಪೊಲೀಸರು ಅನುಮತಿ ಕೊಟ್ಟರು.

ಇದನ್ನೂ ಓದಿ: Karnataka election 2023: ರಾಹುಲ್, ಪ್ರಿಯಾಂಕಾ ಕಾಲಿಟ್ಟಲೆಲ್ಲಾ ಬಿಜೆಪಿಗೆ ಶುಭ ಸಂಕೇತ: ಬಿ. ಶ್ರೀರಾಮುಲು

ಘಟನೆ 2 – ನೈಸ್‌ ರೋಡ್‌ನಿಂದ ಸುಮನಹಳ್ಳಿವರೆಗೂ ರೋಡ್‌ ಬ್ಲಾಕ್‌; ಮಹಿಳೆಯರ ರಂಪಾಟ

ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ನೈಸ್ ರೋಡ್‌ನಿಂದ ಸುಮನಹಳ್ಳಿಯವರೆಗೂ ರೋಡ್ ಬ್ಲಾಕ್ ಮಾಡಲಾಗಿತ್ತು. ಇದರಿಂದ ಬೆಳಗ್ಗೆಯಿಂದ ರಸ್ತೆಯಲ್ಲಿ ಪ್ರಯಾಣಿಕರು ಕಾದು ಕಾದು ರೋಸಿಹೋಗಿದ್ದರು. ಕೊನೆಗೆ ಮನೆಗೆ ವಾಪಸ್‌ ತೆರಳಲು ಸಹ ಸಾರ್ವಜನಿಕರು ಪರದಾಡಿದ ಪ್ರಸಂಗ ನಡೆಯಿತು. ಇದರಿಂದ ತೀವ್ರ ಆಕ್ಷೇಪಗಳು ಕೇಳಿಬಂದವರು. ಅಲ್ಲದೆ, ಈ ಮಾರ್ಗವಾಗಿ ಬರುತ್ತಿದ್ದ ಬಸ್ ಅನ್ನು ಸಹ ತಡೆ ಹಿಡಿದ ಹಿನ್ನೆಲೆಯಲ್ಲಿ ಸುಮನಹಳ್ಳಿ ಜಂಕ್ಷನ್‌ ಬಳಿ ಮಹಿಳೆಯರು ರಂಪಾಟ ನಡೆಸಿದ್ದಾರೆ. ಬಸ್ ಬಂದಿಲ್ಲ, ನಾವೆಲ್ಲಿಗೆ ಹೋಗಬೇಕು? ಎಂದು ಅಳಲು ತೋಡಿಕೊಂಡಿದ್ದಾರೆ.

ಸುಮನಹಳ್ಳಿ ಜಂಕ್ಷನ್‌ ಬಳಿ ಮಹಿಳೆಯರ ಆಕ್ರೋಶ

ಘಟನೆ 3 – ಮದುವೆ ಗಂಡಿಗೂ ತಟ್ಟಿದ ಬಿಸಿ

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಬಿಸಿ ಮದುವೆ ಗಂಡಿಗೂ ತಟ್ಟಿದೆ. ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ಮದುವೆ ಗಂಡನ್ನು ಪೊಲೀಸರು ತಡೆದ ಘಟನೆ ಸುಂಕದಕಟ್ಟೆ ರಸ್ತೆಯಲ್ಲಿ ನಡೆದಿದೆ. ಸುಂಕದಕಟ್ಟೆ ರಸ್ತೆಯಲ್ಲಿರುವ ಅಕ್ಷಯ್ ಕಲ್ಯಾಣ ಮಂಟಪದಲ್ಲಿ ರುದ್ರೇಶ್‌ ಎಂಬುವವರ ವಿವಾಹ ಕಾರ್ಯಕ್ರಮವಿತ್ತು. ಈ ಹಿನ್ನೆಲೆಯಲ್ಲಿ ರುದ್ರೇಶ್‌ ಮತ್ತು ಕುಟುಂಬದವರು ಕಾರಿನಲ್ಲಿ ನರೇಂದ್ರ ಮೋದಿ ರೋಡ್ ಶೋ ಮಾರ್ಗದಲ್ಲೇ ಇದ್ದ ಕಲ್ಯಾಣ ಮಂಟಪಕ್ಕೆ ಹೊರಟಿದ್ದರು. ಈ ವೇಳೆ ಪೊಲೀಸರು ತಡೆದಿದ್ದು, ಮದುವೆ ಇರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ಮದುಮಗ ಹಾಗೂ ಕುಟುಂಬಸ್ಥರನ್ನು ಕಲ್ಯಾಣ ಮಂಟಪಕ್ಕೆ ತೆರಳಲು ಅನುವು ಮಾಡಿಕೊಡಲಾಗಿದೆ. ಆರಂಭದಲ್ಲಿ ತಡೆದಿದ್ದಕ್ಕೆ ಪೊಲೀಸರ ಜತೆ ಕೆಲ ಕಾಲ ವಾಗ್ವಾದವೂ ನಡೆಯಿತು.

ಮದುಮಗನಿಗೂ ತಟ್ಟಿದ ನರೇಂದ್ರ ಮೋದಿ ರೋಡ್‌ ಶೋ ಬಿಸಿ

ಇಕ್ಕಟ್ಟಿಗೆ ಸಿಲುಕಿದ್ದ ಮದುಮಗ; ಪೊಲೀಸರೊಂದಿಗೆ ವಾಗ್ವಾದದ ವಿಡಿಯೊ ಇಲ್ಲಿದೆ

ಘಟನೆ 4 – ಆಂಬ್ಯುಲೆನ್ಸ್‌ ಸಂಚಾರಕ್ಕೆ ನಕಾರ- ನೋವಿನಿಂದ ಗಳಗಳನೆ ಅತ್ತ ಗರ್ಭಿಣಿ

ಭರತ್‌ನಗರ ರಸ್ತೆಯಲ್ಲಿ ಸುಮಾರು 5 ನಿಮಿಷಗಳ ಕಾಲ‌ ಆಂಬ್ಯುಲೆನ್ಸ್‌ವೊಂದು ನಿಂತಲ್ಲೇ ನಿಂತಿತ್ತು. ಟ್ರಾಫಿಕ್‌ ಜಾಮ್‌ ಪರಿಣಾಮ ಹಿಂದೆ ಮುಂದೆ ಹೋಗಲಾಗದೆ ಸಮಸ್ಯೆಯಾಗಿತ್ತು. ಈ ಆಂಬ್ಯುಲೆನ್ಸ್‌ನಲ್ಲಿ ಗರ್ಭಿಣಿ ಇದ್ದು, ನೋವು ಕಾಣಿಸಿಕೊಂಡಿದೆ ಎಂದು ಹೇಳಿದರೂ ಆಕೆಯನ್ನು ಬಿಡದೆ ಪೊಲೀಸರು ಸತಾಯಿಸಿದ್ದಾರೆ ಎನ್ನಲಾಗಿದೆ. ಮಾನವೀಯತೆ ತೋರದ ಪೊಲೀಸರ ವಿರುದ್ಧ ಈ ವೇಳೆ ಸಾರ್ವಜನಿಕವಾಗಿ ಆಕ್ರೋಶವೂ ವ್ಯಕ್ತವಾಗಿತ್ತು. ಗರ್ಭಿಣಿಯನ್ನು ಯುವಕನೊಬ್ಬ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಹೆರಿಗೆ ನೀರು ಒಡೆದಿದ್ದು, ಬಿಟ್ಟುಬಿಡಿ ಎಂದು ಎಷ್ಟೇ ಗೋಗರೆದರೂ ಪೊಲೀಸರು ಮಾತ್ರ ಕನಿಕರ ತೋರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗರ್ಭಿಣಿ ಹಾಗೂ ಯುವಕ ಅಳುತ್ತಲೇ ಅಲ್ಲಿಂದ ಅನ್ಯ ಮಾರ್ಗವನ್ನು ಹುಡುಕಿಕೊಂಡು ಹೊರಟರು.

ಇದನ್ನೂ ಓದಿ: Modi in Karnataka : ನೀವು ಮತ ಹಾಕುವುದು ಸರ್ಕಾರ ರಚನೆಗಲ್ಲ, ರಾಜ್ಯವನ್ನು ದೇಶದಲ್ಲೇ ನಂ. 1 ಮಾಡಲು; ಮೋದಿ ಹೊಸ ವ್ಯಾಖ್ಯಾನ

ಇನ್ನೊಂದೆಡೆ ಶ್ರೀಗಂದ ಕಾವಲ್ ಸರ್ಕಲ್ ಬಳಿ ಸಿಟಿ ಸ್ಕಾನ್ ಮಾಡಿಸಲು ನಾಲ್ಕಾರು ರಸ್ತೆಗಳಲ್ಲಿ ತಿರುಗಾಟ ನಡೆಸಿದರೂ ಬ್ಯಾರಿಕೇಡ್ ಹಾಕಲಾಗಿತ್ತು. ಇದರಿಂದ ರೋಗಿಗಳು ಪರದಾಡುವಂತಾಗಿದ್ದಲ್ಲದೆ, ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವೇಳೆ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆದಿದೆ.

ಸ್ಕೂಟರ್‌ ಏರಿ ಬಂದ ಮದುಮಗಳು; ವಿಡಿಯೊ ಇಲ್ಲಿದೆ

ಘಟನೆ 5 – ಮದುಮಗಳಿಗೂ ಮೋದಿ ಎಂಟ್ರಿ ಕಿರಿಕ್

ಸುಂಕದಕಟ್ಟೆ ಬಳಿಯ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ಮದುವೆ ಸಾಗಲು ಮದುಮಗಳು ಸೇರಿದಂತೆ ಆಕೆಯ ಕುಟುಂಬಸ್ಥರಿಗೆ ತೀವ್ರ ತೊಂದರೆಯಾಗಿದೆ. ಎತ್ತ ನೋಡಿದರೂ ರೋಡ್‌ಗಳು ಬ್ಲಾಕ್‌ ಆಗಿದ್ದವು. ಕೊನೆಗೆ ರೋಸಿಹೋಗಿ ಮದುಮಗಳನ್ನು ಸ್ಕೂಟರ್‌ನಲ್ಲಿ ಮದುವೆ ಮನೆಯತ್ತ ಕುಟುಂಬಸ್ಥರು ಕರೆತಂದರು. ಕೈಯಲ್ಲಿ ಕಲಶ ಹಿಡಿದ ಅವರು ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಪೊಲೀಸರು ತಡೆದರು. ಅದೇ ವೇಳೆ ಮಾಧ್ಯಮದವರೂ ಸಹ ಕ್ಯಾಮೆರಾವನ್ನು ಅತ್ತ ತಿರುಗಿಸಿದ್ದನ್ನು ಕಂಡು ಅವರಿಗೆ ಕಲ್ಯಾಣ ಮಂಟಪಕ್ಕೆ ಹೋಗಲು ಅನುವು ಮಾಡಿ ಕೊಟ್ಟರು.

ಘಟನೆ 6 – ನೈಸ್ ಜಂಕ್ಷನ್‌ನಲ್ಲೂ ಟ್ರಾಫಿಕ್ ಜಾಮ್

ಮಾಗಡಿ ರೋಡ್ ನೈಸ್ ಜಂಕ್ಷನ್‌ನಲ್ಲೂ ಟ್ರಾಫಿಕ್ ಜಾಮ್ ಆಗಿದ್ದು, ಸಂಚಾರ ದಟ್ಟಣೆಯನ್ನು ಸರಿಪಡಿಸುವಲ್ಲಿ ಟ್ರಾಫಿಕ್ ಪೊಲೀಸರು ಹರಸಾಹಸಪಟ್ಟರು.

ಇದನ್ನೂ ಓದಿ: Karnataka Election: ‘ರಾಜ್ಯʼದಲ್ಲಿ ಬೀಡು ಬಿಟ್ಟ ‘ಕೇಂದ್ರ’ ಸಂಪುಟ; ಇವರಿಂದ ಬಿಜೆಪಿ ಅಭ್ಯರ್ಥಿಗಳ ಜಯ ಎಷ್ಟು ದಿಟ?

ನರೇಂದ್ರ ಮೋದಿ ರೋಡ್‌ ಶೋ ಮಾರ್ಗವೇನು?

ಮಾಗಡಿ ರಸ್ತೆ ಬಳಿ ಇರುವ ನೈಸ್ ರೋಡ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಆರಂಭವಾಗಲಿದ್ದು, ಸುಮನಹಳ್ಳಿ ಜಂಕ್ಷನ್‌ವರೆಗೆ ತಲುಪಿ ಅಲ್ಲಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸುಮನಹಳ್ಳಿ ಜಂಕ್ಷನ್ ಸೇರಿದಂತೆ ಸುತ್ತಮುತ್ತಲು ಭಾರಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿದೆ. ಈ ಮಾರ್ಗದಲ್ಲಿ ಬ್ಯಾರಿಕೇಡ್‌ ಹಾಕಲಾಗಿದ್ದು, ಈ ಮಾರ್ಗದಲ್ಲಿನ ವಾಹನ ಸಂಚಾರವನ್ನು ಬೇರೆ ಮಾರ್ಗಕ್ಕೆ ಸ್ಥಳಾಂತರ ಮಾಡಲಾಗಿದೆ.

Exit mobile version