Site icon Vistara News

Road Rage Case: ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಕಾರು ಮಾಲೀಕನ ಕಾಪಾಡಿದ ಡ್ಯಾಶ್‌ ಕ್ಯಾಮೆರಾ; ವಿಡಿಯೊ ಇದೆ

Road Rage Case

ಬೆಂಗಳೂರು: ರಾಜಧಾನಿಯಲ್ಲಿ ರೋಡ್‌ ರೇಜ್‌ ಪ್ರಕರಣಗಳ (Road Rage Case) ಸಂಖ್ಯೆ ಹೆಚ್ಚುತ್ತಿದೆ. ರಸ್ತೆಯಲ್ಲಿ ಜನ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರೂ ವಾಹನ ಅಡ್ಡಗಟ್ಟಿ ಕಿರಿಕ್‌ ಮಾಡುವ ಕಿಡಿಗೇಡಿಗಳನ್ನು ಕಾಣುತ್ತಿರುತ್ತೇವೆ. ಇದೇ ರೀತಿ ನಗರದಲ್ಲಿ ಒಬ್ಬ ವ್ಯಕ್ತಿಗೆ ಕಹಿ ಅನುಭವ ಆಗಿದ್ದು, ಕಾರಿನಲ್ಲಿ ಡ್ಯಾಶ್‌ ಕ್ಯಾಮೆರಾ ಇದ್ದಿದ್ದರಿಂದ ಆತ ಬಚಾವ್‌ ಆಗಿದ್ದಾನೆ.

ರೋಡ್‌ ರೇಜ್‌ ಪ್ರಕರಣದ ಬಗ್ಗೆ ಪಿಯೂಷ್‌ ಕುಕರ್‌ ಎಂಬ ವ್ಯಕ್ತಿ ಎಕ್ಸ್‌ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಡ್ಯಾಶ್‌ ಕ್ಯಾಮೆರಾದಲ್ಲಿ ರೆಕಾರ್ಡ್‌ ಆದ ವಿಡಿಯೊವನ್ನು ಹಾಕಿದ್ದಾರೆ. ನಗರದ ಹೊರವಲಯದ ವರ್ತೂರು ರಸ್ತೆಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಬಳಿ ಸೋಮವಾರ ತಡರಾತ್ರಿ (ಜುಲೈ 1) ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಡಾಶ್‌ ಕ್ಯಾಮ್‌ ಅಗತ್ಯವಿಲ್ಲ ಎಂದು ಯಾರಾದರೂ ನಿಮಗೆ ಹೇಳಿದಾಗ, ಈ ವಿಡಿಯೊವನ್ನು ಅವರಿಗೆ ತೋರಿಸಿ. ಬೆಂಗಳೂರು ಹೊರವಲಯದಲ್ಲಿ ರೋಡ್‌ ರೇಜ್‌ ಘಟನೆ ನಡೆದಿದ್ದು, ರಾತ್ರಿ 10.25ರ ಸುಮಾರಿಗೆ ನಗರದ ಹೊರವಲಯದ ವರ್ತೂರು ರಸ್ತೆಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ ಬಳಿ ನನಗೆ ಕಿರುಕುಳ ನೀಡಲಾಗಿದೆ. ಡ್ಯಾಶ್‌ ಕ್ಯಾಮೆರಾ ಇದ್ದ ಹಿನ್ನೆಲೆಯಲ್ಲಿ ತಾನು ಪಾರಾದೆ ಎಂದು ಪಿಯೂಷ್‌ ಕುಕರ್‌ ಹೇಳಿದ್ದಾರೆ.

ಪಿಯೂಷ್‌ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬ ಸ್ಕೂಟರ್‌ ಚಾಲಕ ದಾರಿ ಬಿಡದೆ ನಡುರಸ್ತೆಯಲ್ಲಿ ಹೋಗುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ. ಅದಾದ ಬಳಿಕ ಬೊಲೆರೋ ವಾಹನ ಚಾಲಕ ಏಕಾಏಕಿ ಬಂದು ಅಡ್ಡಗಟ್ಟುತ್ತಾನೆ. ನಂತರ ಕಾರಿನ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗಲಭೆಗೆ ನಾನು ಯಾವುದೇ ರೀತಿ ಪ್ರಚೋದನೆ ನೀಡದಿದ್ದರೂ ಆತನೇ ಹಿಂದಿನಿಂದ ಜೋರಾಗಿ ಹಾರ್ನ್‌ ಮಾಡುತ್ತಿದ್ದ. ನಂತರ ಆತ ಕಾರಿನ ಹಿಂಬದಿ ತೆರಳಿ ಡ್ಯಾಶ್‌ ಕ್ಯಾಮೆರಾ ಇರುವುದನ್ನು ಗಮನಿಸಿ ವಾಪಸ್‌ ಬಂದಿದ್ದಾನೆ.

ಬೊಲೆರೋ ವಾಹನ ಚಾಲಕ ಪಿಯೂಷ್‌ ಜತೆ ವಾಗ್ವಾದ ನಡೆಸುತ್ತಿದ್ದಾಗ, ಮತ್ತೊಬ್ಬ ವ್ಯಕ್ತಿ ಸ್ಕೂಟರ್‌ನಲ್ಲಿ ಯೂ ಟರ್ನ್‌ ಮಾಡಿಕೊಂಡು ಕಾರಿನ ಬಳಿ ಬರುತ್ತಾನೆ. ಸ್ಕೂಟರ್‌ ಕಾರಿನ ಹತ್ತಿರಕ್ಕೆ ಬಂದಾಗ ಬೊಲೆರೋ ವಾಹನ ಚಾಲಕ, ಕಾರಿನಲ್ಲಿ ಡ್ಯಾಶ್‌ ಕ್ಯಾಮ್‌ ಇರುವ ಬಗ್ಗೆ ಆತನಿಗೆ ಸಂಜ್ಞೆ ಮಾಡುತ್ತಾನೆ. ಆಗ ಇಬ್ಬರೂ ಅಲ್ಲಿಂದ ನಿರ್ಗಮಿಸುತ್ತಾರೆ. ಇದರಿಂದ ಕಾರಿನಲ್ಲಿ ಡ್ಯಾಶ್‌ ಕ್ಯಾಮೆರಾ ಇದ್ದರೆ ಉಪಯೋಗಕ್ಕೆ ಬರುತ್ತದೆ ಎಂದು ಪಿಯೂಷ್‌ ಸಲಹೆ ನೀಡಿದ್ದಾರೆ.

ಇದನ್ನೂ ಓದಿ | Road Accident : ಹೆದ್ದಾರಿಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ಗೆ ‌ವೃದ್ಧ ಸಾವು; ಯುವಕನ ತಲೆ ಮೇಲೆ ಹರಿದ ಟ್ಯಾಂಕರ್‌

ಇನ್ನು ಬೆಂಗಳೂರಿನಲ್ಲಿ, ವಿಶೇಷವಾಗಿ ಐಟಿ ಕಾರಿಡಾರ್‌ ಭಾಗದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ರೋಡ್‌ ರೇಜ್‌ ಪ್ರಕರಣ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ತುರ್ತು ಸಂದರ್ಭಗಳಲ್ಲಿ 112 ಗೆ ಡಯಲ್ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Exit mobile version