Site icon Vistara News

Road Safety: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಪ್ರಾಣ ಹೋದರೆ ಸಹಿಸಲ್ಲ: ಅಪಘಾತಗಳ ಹೆಚ್ಚಳಕ್ಕೆ ಸಿಎಂ ಗರಂ

Road Safety

ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಅಪಘಾತಗಳ (Road Accidents) ಸಂಖ್ಯೆ ಏರಿಕೆಯಾಗುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಅಧಿಕಾರಿಗಳ ಉದಾಸೀನದಿಂದ ಜನರ ಅಮೂಲ್ಯ ಪ್ರಾಣ ಹೋದರೆ ಸಹಿಸಲ್ಲ, ರಸ್ತೆಗಳಿದು ಸುರಕ್ಷತೆ (Road Safety) ಪರೀಕ್ಷಿಸಬೇಕು‌ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿರುವ ಅವರು, ಅಪಘಾತಗಳ ನಿಯಂತ್ರಣಕ್ಕೆ ಸಮನ್ವಯ ಅಗತ್ಯ. ಅಪಘಾತ ವಲಯ ಮತ್ತು ಬ್ಲಾಕ್ ಸ್ಪಾಟ್ ಗುರುತಿಸಿ ಕೈಕಟ್ಟಿ ಕುಳಿತರೆ ನಿಮ್ಮ ಜವಾಬ್ದಾರಿ ಮುಗಿಯುದಿಲ್ಲ. ರಸ್ತೆಗಳಿದು ಸುರಕ್ಷತೆ ಕ್ರಮಗಳನ್ನು ಪರಿಶೀಲಿಸಬೇಕು ಎಂದು ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 34,916 ಅಪಘಾತಗಳು ಸಂಭವಿಸಿದ್ದು, 9943 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಗಳಲ್ಲಿರುವ ರಸ್ತೆ ಸುರಕ್ಷಾ ಸಮಿತಿಗಳು ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ತಡೆಯಲು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.

ಕಂದಾಯ, ಪೊಲೀಸ್‌, ಸಾರಿಗೆ, ನಗರ ಪಾಲಿಕೆ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ. ರಸ್ತೆ ಸುರಕ್ಷತಾ ಸಪ್ತಾಹಗಳು ಕಾಟಾಚಾರಕ್ಕೆ ನಡೆಯಬಾರದು. ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೆ ಹಲವು ಅಪಘಾತಗಳನ್ನು ತಡೆಯಬಹುದಾಗಿದೆ. ನಮ್ಮ ನಿರ್ಲಕ್ಷ್ಯದಿಂದ ಜನರ ಪ್ರಾಣ ಹಾನಿ ಉಂಟಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಹಾಟ್‌ಸ್ಟಾಟ್‌ಗಳನ್ನು ಗುರುತಿಸಿ ಹೆದ್ದಾರಿಗಳಲ್ಲಿ ಅಂಬ್ಯುಲೆನ್ಸ್‌ ವ್ಯವಸ್ಥೆ, ಟ್ರಾಮಾ ಸೆಂಟರ್‌ ನೆಟ್‌ವರ್ಕ್‌ ಮಾಡಬೇಕು ಎಂದರು.

ಇದನ್ನೂ ಓದಿ | Tourism Policy: ಹೊಸ ಪ್ರವಾಸೋದ್ಯಮ ನೀತಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಸಿಎಂ ಸೂಚನೆ

ಭೂ ವಂಚನೆ ತಡೆಗೆ ಪಹಣಿ-ಆಧಾರ್‌ ಜೋಡಣೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ

ಬೆಂಗಳೂರು: ಜಮೀನು ಮಾರಾಟದಲ್ಲಿ ವಂಚನೆ (land fraud) ತಡೆಯಲು ಪಹಣಿ-ಆಧಾರ್‌ ಜೋಡಣೆ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಬೇಕು. ಒಬ್ಬರು ಮೂರ್ನಾಲ್ಕು ದಶಕಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದು, ಅದಕ್ಕೆ ಬೇರೆ ವ್ಯಕ್ತಿಗಳು ಭೂ ಮಂಜೂರಾತಿ ಮಾಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ಭೂ ಮಂಜೂರಾತಿ ರದ್ದುಪಡಿಸಬೇಕು. ಭೂಮಿಯ ಸ್ವಾಧೀನ ಹೊಂದಿರುವವರಿಗೆ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ನಗರದ ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ವಿವಿಧ ಇಲಾಖೆಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಪಡೆಯಲು ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ತಿಂಗಳ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ತಮ್ಮ ಅಗತ್ಯತೆಯನ್ನು ವಿವರಿಸುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಸಹ ಈ ಅಗತ್ಯತೆಗಳಿಗೆ ತಕ್ಕಂತೆ ಭೂಮಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ 1.40 ಕೋಟಿ ಎಕರೆ ಸರ್ಕಾರಿ ಜಮೀನು ಇದ್ದು, ಲ್ಯಾಂಡ್‌ ಬೀಟ್‌ ಮೊಬೈಲ್ ತಂತ್ರಾಂಶದ ಮೂಲಕ ದತ್ತಾಂಶ ಸೃಜಿಸಲಾಗಿದೆ. 14.32 ಲಕ್ಷ ಸರ್ಕಾರಿ ಜಮೀನುಗಳ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ. ಈ ಪೈಕಿ 10.78 ಲಕ್ಷ ಜಮೀನುಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನೂ ಗುರುತಿಸಲಾಗಿದೆ. ಕೆರೆ ಮತ್ತು ಸ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು, ಸಮೀಕ್ಷೆ ನಡೆಸಲಾಗಿದೆ. ಒಟ್ಟು 91,000 ಜಮೀನುಗಳು ಒತ್ತವರಿಯಾಗಿರುವುದನ್ನು ಗುರುತಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ | PM Modi Russia Visit: ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲವು; ಭಾರತೀಯ ಯೋಧರ ಬಿಡುಗಡೆಗೆ ರಷ್ಯಾ ಸಮ್ಮತಿ

ಆಗಸ್ಟ್‌ ತಿಂಗಳಿನಿಂದ ಸರ್ವೆಯರ್‌ಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಇತರ ಇಲಾಖೆಯವರೂ ತಮ್ಮ ಜಮೀನು ಎಲ್ಲಿದೆ ಹಾಗೂ ಒತ್ತುವರಿಯಾಗಿದೆಯೇ ಎಂಬ ಕುರಿತು ಪರಿಶೀಲಿಸಲು ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಈ ವೇಳೆ ಸಿಎಂ ಪ್ರತಿಕ್ರಿಯಿಸಿ, ವಿವಿಧ ಇಲಾಖೆಗಳ ಆಸ್ತಿ ರಕ್ಷಣೆಗೆ ಎಸ್ಟೇಟ್‌ ಅಧಿಕಾರಿಗಳನ್ನು ನೇಮಕ ಮಾಡಬೇಕು. ತಮ್ಮ ಇಲಾಖೆಗೆ ಹಂಚಿಕೆಯಾದ ಭೂಮಿಯ ಮಾಹಿತಿಯನ್ನು ಆರ್.ಟಿ.ಸಿ.ಯಲ್ಲಿ ಇಂದೀಕರಣ ಮಾಡಬೇಕು. ಹಾಗೂ ಒತ್ತುವರಿ ತೆರವುಗೊಳಿಸಿ, ತಮ್ಮ ಆಸ್ತಿಯನ್ನು ಸಂರಕ್ಷಿಸಬೇಕು. ಸರ್ಕಾರಿ ಜಮೀನು ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಸೂಚಿಸಿದರು.

Exit mobile version